ಮಸೀದಿಯಲ್ಲಿನ ಧ್ವನಿವರ್ಧಕದ ಶಬ್ಧವನ್ನು ನಿಲ್ಲಿಸಬೇಕು ಇಲ್ಲವಾದರೆ ನಾವೂ ದೇವರ ಹಾಡುಗಳನ್ನು ಜೋರಾಗಿ ಹಾಕುತ್ತೇವೆ ಎಂಬ ವಿಚಾರ ಬಹಳಷ್ಟು ಚರ್ಚೆಯಲ್ಲಿದೆ. ಮಹಾರಾಷ್ಟ್ರದಲ್ಲೂ ಕೂಡ ಹನುಮಾನ್ ಚಾಲೀಸಾ ವಿಚಾರವಾಗಿ ಈಗಾಗಲೇ ಸಂಸದೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಇಂಥದ್ದೆ ವಿಚಾರಕ್ಕೆ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಔರಂಗಾಬಾದ್ ನ ಸತಾರದಲ್ಲಿ ಗಡಪ್ಪ ಮುಲ್ಕುನಾಯ್ಕ್ ಎಂಬುವವರು ವಾಸಿಸುತ್ತಿದ್ದಾರೆ. ಇವರು ರೈಲ್ವೆ ರಕ್ಷಣಾ ದಳದಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸತಾರದಲ್ಲಿ ಮಸೀದಿಯ ಪಕ್ಕವೇ ಇವರ ಮನೆ ಇದೆ. ಮಸೀದಿಯಲ್ಲಿ ಆಜಾನ್ ಕೂಗುವ ವೇಳೆ ಇವರು ತಮ್ಮ ಮನೆಯಲ್ಲಿ ಜೋರಾಗಿ ಶಬ್ದ ಬರುವಂತೆ ಹಾಡನ್ನು ಹಾಕುತ್ತಿದ್ದರು. ಈ ಹಿನ್ನೆಲೆ ಸಮಾಜದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಇವರ ಹಾಡಿನ ಶಬ್ಧ ಅಕ್ಕ ಪಕ್ಕದ ಮನೆಯವರಿಗೂ ಕಿರಿಕಿರಿ ಮಾಡಿದೆ. ಹೀಗಾಗಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಸಾಕಷ್ಟು ದೂರಿನ ಕರೆಗಳು ಹೋಗಿವೆ. ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸತಾರದ ಪೊಲೀಸ್ ಆಯುಕ್ತರಾದ ನಿಖಿಲ್ ಗುಪ್ತಾ ಅವರು ಈ ಕೇಸನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದಾರೆ. ಗಡಪ್ಪ ವಿರುದ್ಧ ದೂರು ದಾಖಲಿಸಲು ಸೂಚಿಸಿದ್ದಾರೆ. ಸದ್ಯ ಗಡಪ್ಪ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆ ನಡೆಸಲಿದ್ದಾರೆ.