ಚಿತ್ರದುರ್ಗ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ 12 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಈ ಪಾದಯಾತ್ರೆ ಹಿರಿಯೂರಿನಿಂದ ಚಳ್ಳಕೆರೆ ಕಡೆ ಸಾಗಿದೆ. ಇಂದು ಬೆಳಗ್ಗೆ ಹರ್ತಿಕೋಟೆ ಗ್ರಾಮದಿಂದ ಯಾತ್ರೆ ಸಾಗಿತ್ತು. ಆದರೆ ಬೆಳಿಗ್ಗೆ ಮಳೆ ಬಂದ ಹಿನ್ನೆಲೆಯಲ್ಲಿ ಒಂದು ಗಂಟೆ ತಡವಾಗಿ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿದೆ. ಈ ಪಾದಯಾತ್ರೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಇರುವ ಚೇತನ ಹೋಟೆಲ್ ಬಳಿ ವಿಶ್ರಾಂತಿ ಪಡೆದು ಸಂಜೆ ಚಳ್ಳಕೆರೆ ನಗರ ತಲುಪಲಿದೆ. ನಂತರ ಮೊಳಕಾಲ್ಮೂರು ಮಾರ್ಗವಾಗಿ ಬಳ್ಳಾರಿ ತಲುಪಲಿದೆ.
ಇನ್ನು ಪಾದಯಾತ್ರೆಯಲ್ಲಿ ಕೂಲಿ ಕಾರ್ಮಿಕ ಮಹಿಳೆಯರ ಜೊತೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದಾರೆ. ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದ ಬಳಿ ಯಾತ್ರೆ ಸಾಗುವ ವೇಳೆ, ಕೂಲಿ ಕಾರ್ಮಿಕ ಮಹಿಳೆಯರು ಜೊತೆಯಾಗಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕರು ರಾಹುಲ್ ಗಾಂಧಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಹಿಂದಿ ಭಾಷೆಯಲ್ಲಿ ರಾಹುಲ್ ಗಾಂಧಿ ಅವರು ನಮ್ಮ ಜೊತೆ ಮಾತಾಡಿದರು. ನಾವು ದೂರದಲ್ಲಿ ನೋಡಲು ನಿಂತಿದ್ದೆವು. ಅವರು ಕರೆದು ಮಾತಾನಾಡಿಸಿದ್ದು ತುಂಬಾ ಖುಷಿಯಾಯಿತು. ನಾವು ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೆವೆ ಎಂದು ಕೊಂಡಿರಲಿಲ್ಲ ಎಂದಿದ್ದಾರೆ.
ಇನ್ನು ಪಾದಯಾತ್ರೆಯಲ್ಲಿ ನಾಲ್ಕು ಮಕ್ಕಳ ಜೊತೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ನಾಲ್ಕು ಚಿಕ್ಕ ಮಕ್ಕಳು ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು