ನವದೆಹಲಿ: ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಚೆಯಾದ ಹಿನ್ನೆಲೆ, ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಅವರು ವಾಸವಿದ್ದ ಸರ್ಕಾರಿ ಬಂಗಲೆಯನ್ನು ಇಂದು ಹಸ್ತಾಂತರ ಮಾಡಲಾಗಿದೆ. ಈ ವೇಳೆ ಸಿಬ್ಬಂದಿಗಳಿಗೆಲ್ಲಾ ಧನ್ಯವಾದ ತಿಳಿಸಿದ್ದಾರೆ.
2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿ, ಲೋಕಸಭಾ ಸಂಸದರಾಗಿದ್ದರು. ಅಂದಿನಿಂದ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ಬಂಗಲೆಯನ್ನು ನೀಡಲಾಗಿತ್ತು. ಸುಮಾರು ಹದಿನೆಂಟು ವರ್ಷಗಳ ಕಾಲ ಈ ಬಂಗಲೆ ಅಧಿಕೃತ ಸರ್ಕಾರಿ ನಿವಾಸವಾಗಿತ್ತು. ಈಗ ಸಂಸದ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆ ಸರ್ಕಾರಿ ನಿವಾಸ ಖಾಲಿ ಮಾಡಲು ಸಚಿವಾಲಯ ಏಪ್ರಿಲ್ 22 ಕೊನೆಯ ಗಡುವು ನೀಡಿತ್ತು.
ಹೀಗಾಗಿ ಇಂದು ರಾಹುಲ್ ಗಾಂಧಿ ಮನೆಯನ್ನು ಖಾಲಿ ಮಾಡಿದ್ದಾರೆ. ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲಾ ಸಾಗಿಸಿದ ಮೇಲೆ, ಖಾಲಿ ಮನೆಯಲ್ಲಿ ರಾಹುಲ್ ಗಾಂಧಿ ಓಡಾಡಿದ್ದಾರೆ. ಬಳಿಕ ಎಲ್ಲಾ ಸಿಬ್ಬಂದಿಗಳಿಗೂ ಕೈಕುಲುಕಿ ಧನ್ಯವಾದ ತಿಳಿಸಿದ್ದಾರೆ. ಬಳಿಕ ಎಲ್ಲಾ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ನೀಡಿ, ಕಡೆಗೆ ಮನೆಯ ಬಾಗಿಲನ್ನು ತಾವೇ ಹಾಕಿ, ಕೀಯನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೂಡ ಇದ್ದರು.