Rahul Gandhi : ಸಾವರ್ಕರ್ ಕುರಿತ ವಿವಾದಾತ್ಮಕ ಹೇಳಿಕೆ : ರಾಹುಲ್ ಗಾಂಧಿಗೆ ಕೋರ್ಟ್ ಸಮನ್ಸ್

ಸುದ್ದಿಒನ್ : ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯವು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ, ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಹಿಂದುತ್ವ ಸಿದ್ಧಾಂತಗಳ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಿಂದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 23ರಂದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

ಸಾವರ್ಕರ್ ಅವರು ತಮ್ಮ ಐವರು ಸ್ನೇಹಿತರೊಂದಿಗೆ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಮಾಡಿ ಸಂತೋಷಪಟ್ಟಿದ್ದರು ಎಂದು ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು ಎಂದು ಲಂಡನ್‌ನಲ್ಲಿ ರಾಹುಲ್ ಗಾಂಧಿಯವರು ಹೇಳಿಕೆ ನೀಡಿದ್ದರು‌. ಈ ವಿಚಾರ ವಿವಾದಾಸ್ಪದವಾಗಿತ್ತು. ರಾಹುಲ್ ಗಾಂಧಿ ಹೇಳಿದಂತೆ ಸಾವರ್ಕರ್ ಜೀವನದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಸಾವರ್ಕರ್ ತಮ್ಮ ಪುಸ್ತಕಗಳಲ್ಲಿ ಎಲ್ಲಿಯೂ ಆ ರೀತಿ ಬರೆದುಕೊಂಡಿಲ್ಲ ಎಂದು ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸ್ಪಷ್ಟಪಡಿಸಿದ್ದರು. ರಾಹುಲ್ ಗಾಂಧಿ ದುರುದ್ದೇಶದಿಂದ ಸಾವರ್ಕರ್ ವಿರುದ್ಧ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ತನಿಖೆ ನಡೆಸಿದ ಪುಣೆ ಪೊಲೀಸರು, ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಅವರ ಆಕ್ಷೇಪಾರ್ಹ ಮಾತು ನಿಜ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ನ್ಯಾಯಾಲಯ ಪರಿಗಣಿಸಿದ್ದು, ಅಕ್ಟೋಬರ್ 23ರಂದು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಸತ್ಯಕಿ ಸಾವರ್ಕರ್ ಪರ ವಕೀಲ ಸಂಗ್ರಾಮ್ ಕೋಲಾಟ್ಕರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *