ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಹೊರಟಿರುವ ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿಗೆ ಬೆಂಬಲಿಸುವುದಕ್ಕಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಭಾರತ್ ಜೋಡೋ ಯಾತ್ರೆ ನಡೆಸಲಾಯಿತು.
ತುಂತುರು ಮಳೆಯಲ್ಲಿಯೇ ರಾಷ್ಟ್ರಧ್ವಜ ಹಿಡಿದು ಭಾರತ್‍ಜೋಡೋ ಚೈತನ್ಯ ಯಾತ್ರೆ ಹೊರಟ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕ್‍ರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ದೇಶದ ಐಕ್ಯತೆ, ಏಕತೆ, ಸಮಗ್ರತೆಗಾಗಿ ರಾಹುಲ್‍ಗಾಂಧಿ ಭಾರತ್‍ಜೋಡೋ ಯಾತ್ರೆಯನ್ನು ಆರಂಭಿಸಿದ್ದಾರೆ. ಯಾತ್ರೆ ನಮ್ಮ ಜಿಲ್ಲೆಗೆ ಬಂದಾಗ ಭವ್ಯವಾಗಿ ಸ್ವಾಗತಿಸಿ ರಾಹುಲ್ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕೋಣ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಯವರು ಚುನಾವಣಾ ಪೂರ್ವದಲ್ಲಿ ನೀಡಿರುವ ಯಾವ ಭರವಸೆಯನ್ನು ಈಡೇರಿಸದೆ ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿರುವುದರಿಂದ ಜನ ಬೇಸತ್ತು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಈಗಿನಿಂದಲೇ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಕಷ್ಟ ಕಾಲದಲ್ಲಿರುವ ಕಾಂಗ್ರೆಸ್‍ಗೆ ಎಲ್ಲರ ಬೆಂಬಲ ಸಿಗುತ್ತಿದೆ. ರಾಹುಲ್‍ಗಾಂಧಿ ದಿನಕ್ಕೆ 20 ರಿಂದ 25 ಕಿ.ಮೀ.ಪಾದಯಾತ್ರೆಯಲ್ಲಿ ನಡೆಯಲಿದ್ದಾರೆ. ನಮ್ಮ ಜಿಲ್ಲೆಗೆ ಯಾತ್ರೆ ಆಗಮಿಸಿದಾಗ ಎಲ್ಲರೂ ರಾಹುಲ್‍ರವರ ಜೊತೆ ಯಾತ್ರೆಯಲ್ಲಿ ಪಾಲ್ಗೊಳ್ಳೋಣ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ಉಪ್ಪಿನ ಸತ್ಯಾಗ್ರಹ, ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಚಳುವಳಿ ನಡೆದ ರೀತಿಯಲ್ಲಿಯೇ ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆಗೆ ಮುಂದಾಗಿರುವುದರಿಂದ ದೇಶದಲ್ಲಿ ಹೊಸ ಸಂಚಲನ ಉಂಟಾಗಿದೆ. ಒಟ್ಟು 3800 ಕಿ.ಮೀ.ನಡೆಯುತ್ತಾರೆಂದರೆ ಸುಲಭದ ಮಾತಲ್ಲ. ಮಾಡುವ ಇಲ್ಲವೇ ಮಡಿ ಎನ್ನುವ ಸಂಕಲ್ಪ ಕೈಗೊಂಡಿದ್ದಾರೆ. ಇದಕ್ಕೆ ಪಕ್ಷದ ಪ್ರತಿಯೊಬ್ಬ ಕಾಯಕರ್ತನೂ ಹಾಗೂ ಮುಖಂಡರು ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.
ಯಾವುದೇ ಅಧಿಕಾರದ ಆಸೆಗಾಗಿ ರಾಹುಲ್‍ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿಲ್ಲ. ಕೇಂದ್ರ ಹಾಗೂ ಬಿಜೆಪಿ.ಸರ್ಕಾರದ ದುರಾಡಳಿತದ ವಿರುದ್ದ ಯುವ ಜನಾಂಗವನ್ನು ಎಚ್ಚರಿಸುವುದಕ್ಕಾಗಿ ಯಾತ್ರೆಗೆ ಇಳಿದಿದ್ದಾರೆ. ಪ್ರಜ್ಞಾವಂತಿಕೆ ಜನರಲ್ಲಿ ಮರೆ ಮಾಚಿದೆ. ಪ್ರಧಾನಿ ಮೋದಿ ಒಂದು ಭಾಷಣದಲ್ಲಿ ಆರರಿಂದ ಏಳು ಸುಳ್ಳು ಹೇಳುತ್ತಾರೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ರಾಹುಲ್‍ಗಾಂಧಿ ಪಾದಯಾತ್ರೆಯ ಉದ್ದಕ್ಕೂ ದೇಶದ ಜನಸಾಮಾನ್ಯರ, ರೈತರ, ಮಹಿಳೆಯರ, ಕೂಲಿ ಕಾರ್ಮಿಕರ, ನಿರುದ್ಯೋಗ ಯುವಕರ ಸಮಸ್ಯೆಗಳನ್ನು ಆಲಿಸಿ ಪಟ್ಟಿ ಮಾಡಿಕೊಂಡು ಮುಂದೆ ಪಕ್ಷ ಅಧಿಕಾರಕ್ಕೆ ಬಂದಾಗ ಯಾವ ರೀತಿಯ ಕಾರ್ಯಕ್ರಮ ಹಾಕಿಕೊಳ್ಳಬೇಕು ಎನ್ನುವುದು ಅವರ ಉದ್ದೇಶ. ಜಿಲ್ಲೆಯಲ್ಲಿ ಏಳು ದಿನಗಳ ಕಾಲ ಯಾತ್ರೆ ಸಂಚರಿಸಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಜೋದ್‍ಪುರದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಐದು ನೂರು ಕಿ.ಮೀ.ಪಾದಯಾತ್ರೆ ನಡೆಯಲಿದ್ದು, ಜಿಲ್ಲೆಯಲ್ಲಿ 130 ರಿಂದ 150 ಕಿ.ಮೀ.ಪಾದಯಾತ್ರೆ ಸಂಚರಿಸಲಿದೆ. ದೇಶದ ಸ್ವಾತಂತ್ರಕ್ಕಾಗಿ ಹೋರಾಡದ ಕೋಮುವಾದಿ ಬಿಜೆಪಿ.ಯವರು ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಎಲ್ಲಾ ಜಾತಿ ಧರ್ಮದವರನ್ನು ಒಗ್ಗಟ್ಟಾಗಿಟ್ಟಿರುವುದು ಸಂವಿಧಾನ. ಅದಕ್ಕಾಗಿ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಹನುಮಲಿ ಷಣ್ಮುಖಪ್ಪ ಇವರುಗಳು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಉಪಾಧ್ಯಕ್ಷರುಗಳಾದ ಕುಮಾರ್‍ಗೌಡ, ರವಿಕುಮಾರ್, ನಜ್ಮತಾಜ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಮುನಿರಾ ಎ.ಮಕಾಂದಾರ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಎಸ್.ಟಿ.ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್‍ಪೂಜಾರಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಆರತಿ ಮಹಡಿ ಶಿವಮೂರ್ತಿ, ನ್ಯಾಯವಾದಿಗಳಾದ ಗಂಗಾಧರ್, ಸುದರ್ಶನ್, ರವಿ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು.