ಬೆಂಗಳೂರು: ಇವತ್ತಿಗೆ ಸರಿಯಾಗಿ ಒಂದು ತಿಂಗಳು.. ಅಪ್ಪು ಇನ್ನಿಲ್ಲ ಎಂಬ ಆ ಕರಾಳ ಸುದ್ದಿ ಕಿವಿಗೆ ಬಿದ್ದಿತ್ತು.. ಯಾರಲ್ಲೂ ನಂಬುವ ವ್ಯವಧಾನವಿರಲಿಲ್ಲ. ಅರಗಿಸಿಕೊಳ್ಳುವ ಶಕ್ತಿಯೂ ಇರಲಿಲ್ಲ. ಎಲ್ಲರಲ್ಲೂ ನೋವು, ಆಕ್ರಂಧನ ಮನೆ ಮಾಡಿತ್ತು. ಅಪ್ಪು ನಮ್ಮನ್ನ ಅಗಲಿದ್ದಾರೆ ಅನ್ನೋ ಮಾತು ಕೇಳೋಕೆ ಕಿರಿಕಿರಿ ಆಗ್ತಾ ಇತ್ತು. ಒಂದು ತಿಂಗಳು ಕಳೆದಿದೆ. ಆದ್ರೆ ಇವತ್ತಿಗೂ ಈ ಕ್ಷಣಕ್ಕೂ ಆ ಸತ್ಯವನ್ನ ಒಪ್ಪಿಕೊಳ್ಳೋದಕ್ಕೆ ಆಗ್ತಿಲ್ಲ.
ಜನಸಾಮಾನ್ಯರಾದವರು, ಅಭಿಮಾನಿಗಳಾದವರ ಕೈನಲ್ಲೇ ಆ ಸತ್ಯ ಸಹಿಸಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಇನ್ನು ತೀರಾ ಹತ್ತಿರದಿಂದ ಕಂಡ ಇಂಡಸ್ಟ್ರಿಯವರು, ಅವರ ಜೊತೆಗೆ ಒಂದು ಸಿನಿಮಾ ಮಾಡ್ಲೇಬೇಕು ಅಂತ ಆಸೆಪಟ್ಟವರಿಗೆ ಇನ್ನೆಷ್ಟು ನೋವಾಗಿರಬೇಡ.
ಅದೆಲ್ಲ ಬಿಡಿ ಜೊತೆಯಲ್ಲೇ ಇದ್ದವರು, ಜೊತೆಯಲ್ಲೇ ಬೆಳೆದವರು, ಅಪ್ಪನ ಅಪ್ಪುಗೆ ಅನುಭವಿಸಿದವರು. ಪತಿಯ ಏಳ್ಗೆಗೆ ಹೆಗಲು ಕೊಟ್ಟವರು, ತಮ್ಮನ ಗುಣ ನೋಡಿ ಕೊಂಡಾಡಿದ ಇಬ್ಬರು ಅಣ್ಣಂದಿರ ಸ್ಥಿತಿ ಹೇಗಾಗಿರಬೇಡ. ಆ ಕಹಿ ಸತ್ಯವನ್ನರಿತು ಇಡೀ ಕುಟುಂಬ ಜೀವನ ದೂಡಬೇಕಲ್ಲ ಅದಕ್ಕಿಂತ ನೋವು ಸಂಕಟ ಮತ್ತೊಂದಿಲ್ಲ.
ಇವತ್ತು ಅಪ್ಪು ಅವರ ತಿಂಗಳ ಕಾರ್ಯ. ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಬಂದು ಕಾರ್ಯ ಮುಗಿಸಿದ್ದಾರೆ. ಈ ವೇಳೆ ರಾಘಣ್ಣ ತಮ್ಮನನ್ನ ನೆನೆದು ಭಾವುಕರಾಗಿದ್ದಾರೆ. ಯಾಕಂದ್ರೆ ರಾಘಣ್ಣನಿಗೆ ಅಪ್ಪು ಅದೆಷ್ಟು ಮುಖ್ಯವಾಗಿದ್ದರು ಅನ್ನೋದನ್ನ ರಾಘಣ್ಣ ಅದಾಗಲೇ ಹೇಳಿದ್ದಾರೆ. ರಾಘಣ್ಣನ ಜೀವ ಉಳಿಸಿದಾತ ಮಹಾತ್ಮನೆ ಇನ್ನಿಲ್ಲವಾದಾಗ ಅವರ ನೋವು ಅಪಾರ.
ಕಾರು, ಬಂಗಲೆ, ಹಣ, ಆಸ್ತಿ, ಆಳು ಕಾಳು ಎಲ್ಲವೂ ಮನೆಯಲ್ಲೇ ಇದೆ. ಆದ್ರೆ ಒಂದೈದು ನಿಮಿಷ ಆ ದೇವರು ಅಪ್ಪುಗಾಗಿ ಕೊಟ್ಟಿದ್ದರೆ ಇಂದು ನಗು ನಗುತಾ ಆತ ನಮ್ಮ ಜೊತೆಯಲ್ಲೇ ಇರ್ತಿದ್ದ. ಎಲ್ಲವನ್ನು ಕೊಟ್ಟ ಭಗವಂತ ಒಂದೈದು ನಿಮಿಷ ಸಮಯ ಕೊಡಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.