ಬೆಂ.ಗ್ರಾಮಾಂತರ: ಉತ್ತರ ಪ್ರದೇಶದ ಮಾದರಿಯಲ್ಲೇ ಇಲ್ಲಿಯೂ ಬುಲ್ಡೋಜರ್ ಗಳ ಕಾನೂನು ತಂದರೆ ಬುದ್ದಿ ಬರುತ್ತದೆ. ಬಂದಿಸಿದರೆ ಜಾಮೀನು ತೆಗೆದುಕೊಂಡು ಒಂದು ವಾರಕ್ಕೆ ಹೊರಗೆ ಬರುತ್ತಾರೆ. ಆದರೆ ಮನೆ ಮಠ ಇಲ್ಲದಂಗೆ ಮಾಡಿದರೆ ಬುದ್ದಿ ಕಲಿಯುತ್ತಾರೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಕೋಮುಗಲಭೆ ಸೃಷ್ಟಿಸುವವರನ್ನು ಬಂಧಿಸಿದರೆ ಒಂದು ವಾರಕ್ಕೆ ಆಚೆ ಬರುತ್ತಾರೆ. ಮತ್ತೆ ಅದೇ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿ ಗಲಭೆಯಲ್ಲಿ ಅರೆಸ್ಟ್ ಆದವರು ರೌಡಿಶೀಟರ್ ಗಳೇ. ಅರೆಸ್ಟ್ ಆದ ಒಂದೇ ವಾರಕ್ಕೆ ಹೊರಗೆ ಬಂದು ಮತ್ತೆ ಕೆಲಸ ಶುರು ಮಾಡಿದ್ದಾರೆ. ಅವರು ಬುದ್ದಿ ಕಲಿಯಲ್ಲ. ಬುದ್ದಿ ಕಲಿಯಬೇಕೆಂದರೆ ಮನೆ ಮಠ ಇಲ್ಲದ ಹಾಗೇ ಮಾಡಿದರೆ ದಾರಿಗೆ ಬರುತ್ತಾರೆ. ಈ ಥರದ ಮನಸ್ಥಿತಿ ಇರುವವರಿಗೆ ಉತ್ತರ ಪ್ರದೇಶದ ರೀತಿಯೇ ಕಾನೂನು ತರಬೇಕು.
ಮುಸ್ಲಿಂರಲ್ಲಿ ತುಂಬಾ ಒಳ್ಳೆಯವರು ಇದ್ದಾರೆ. ಆದರೆ ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಈ ರೀತಿಯ ಕಾರ್ಯಾಚರಣೆ ಬಹಳ ಮುಖ್ಯವಾಗುತ್ತದೆ. ರಾಜಸ್ಥಾನದಲ್ಲಿ 400 ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ಕೆಡವಿರುವುದು ಖಂಡನೀಯ. ರಾಜಸ್ಥಾನ ಸರ್ಕಾರ ಹಿಂದೂ ವಿರೋಧಿ ನೀತಿ ತಾಳಿದೆ. ಇದು ಖಂಡನೀಯ ಎಂದಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಬಹುಸಂಖ್ಯಾತರನ್ನು ನಿರ್ಲಕ್ಷಿಸಿದ್ದೇ ಕಾಂಗ್ರೆಸ್ ಗೆ ಮುಳುವಾಗಿದೆ. ಕಾಂಗ್ರೆಸ್ ಬರೀ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತದೆ. ಈಗಾಗಲೇ ಬಿಜೆಪಿ ವಿಧಾನಸಭಾ ಚುನಾವಣೆಯ ಪ್ರಚಾರ ಆರಂಭಿಸಿದೆ. ಜನರಿಗೆ ಬೇಕಾಗಿರುವುದು ಪ್ರಧಾನಿ ಮೋದಿಯವರು ಎಂದಿದ್ದಾರೆ.