ಬೆಂಗಳೂರು: ಇತ್ತೀಚಗೆ ಅಧಿಕಾರಗಳ ಜೊತೆಗಿನ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ್ ಇರುವ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋ ವಿರೋಧ ಪಕ್ಷಗಳಿಗೆ ಚರ್ಚೆಯ ವಿಚಾರ ಕೂಡ ಆಗಿತ್ತು. ಸಾಕಷ್ಟು ಟ್ವೀಟ್ ಕೂಡ ಮಾಡಿದ್ದರು. ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ಆದರೆ ಇದೇ ವಿಚಾರಕ್ಕೆ ಇದೀಗ ಬಿಜೆಪಿ ನಾಯಕ ಆರ್ ಅಶೋಕ್ ದೂರು ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿದ್ದ ಸಭೆಯಲ್ಲಿ ಸುರ್ಜೆವಾಲ ಅವರು ಇದ್ದ ಹಿನ್ನೆಲೆ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಆರ್ ಅಶೋಕ್ ನೇತೃತ್ವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ. ದೂರು ನೀಡಿದ ಬಳಿಕ ಮಾತನಾಡಿದ ಆರ್ ಅಶೋಕ್, ಬೆಂಗಳೂರಿಗೆ ಅನೇಕ ಸಂಸದರು ಇದ್ದಾರೆ. ಆದರೆ ಇವರ್ಯಾರನ್ನು ಸಭೆಗೆ ಕರೆಯದೆ ಸುರ್ಜೆವಾಲ ಅವರನ್ನು ಮಾತ್ರ ಸಭೆಗೆ ಕರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಮಹಾನಗರ ಪಾಲಿಕೆಯನ್ನು ಕಾಂಗ್ರೆಸ್ ಕಚೇರಿ ಮಾಡಲು ಹೊರಟಿದೆ ಎನಿಸುತ್ತದೆ.
ನಮ್ಮ ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಅಧಿಕಾರದ ಮದದಿಂದ ಈ ರೀತಿ ನಡೆದುಕೊಳ್ಳುತ್ತಿದೆ. ಸಭೆಯಲ್ಲಿ ಸುರ್ಜೆವಾಲ್ ಕುಳಿತಿದ್ದಾರೆ ಓಕೆ. ಆದರೆ ಮೇನ್ ಚೇರ್ ನಲ್ಲಿ ಕೂರಿಸಿ ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು. ಅದಕ್ಕೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದಿದ್ದಾರೆ.