ಗುಣಮಟ್ಟದ ತರಬೇತಿಯಿಂದ ಉತ್ತಮ ಕ್ರೀಡಾಪಟುಗಳ ಸೃಷ್ಠಿ ಸಾಧ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

suddionenews
2 Min Read

 

ಚಿತ್ರದುರ್ಗ,(ಅಕ್ಟೋಬರ್ 14) :  ದೈಹಿಕ ಶಿಕ್ಷಣ ಶಿಕ್ಷಕರು ಗುಣಮಟ್ಟದ ತರಬೇತಿ ನೀಡಿ ಉತ್ತಮ ಕ್ರೀಡಾಪಟುಗಳನ್ನು ಸೃಷ್ಠಿ ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಸರ್ಕಾರಿ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 14 ಮತ್ತು 17 ವರ್ಷದೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಬೆಂಗಳೂರು ವಿಭಾಗ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಹ್ಯಾಂಡ್‍ಬಾಲ್ ಪಂದ್ಯಾವಳಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೆ ವಿಶೇಷವಾದ ಆಸಕ್ತಿ ಹಾಗೂ ಆದ್ಯತೆ ನೀಡುವುದರ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಪಡೆಯಲು ಭಾರತ ಮುನ್ನುಗ್ಗುತ್ತಿದೆ. ದೇಶ ಪ್ರತಿನಿಧಿಸುವಂತಹ ಕ್ರೀಡಾಪಟುಗಳೊಂದಿಗೆ ಚಹಾ, ಔತಣ ಕೂಟಗಳನ್ನು ಏರ್ಪಡಿಸಿ ಗೌರವಿಸುವಂಥದ್ದು ಭಾರತದ ಇತಿಹಾಸ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚು ಹಣಕಾಸಿನ ನೆರವು ನೀಡುವುದರ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ ಮಾತನಾಡಿ, ಹೊನಲು ಬೆಳಕಿನ ಹ್ಯಾಂಡ್‍ಬಾಲ್ ಪಂದ್ಯಾವಳಿಗೆ ರಾಜ್ಯದ 11 ಜಿಲ್ಲೆಗಳಿಂದ ಬಂದಿರುವಂತಹ 600 ಕ್ರೀಡಾಪಟುಗಳಿಗೆ ಹಾಗೂ ತಂಡದ ವ್ಯವಸ್ಥಾಪಕರು, ದೈಹಿಕ ಶಿಕ್ಷಕರಿಗೆ ತಿಂಡಿ, ಉಪಹಾರ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಕ್ರೀಡಾಪಟುಗಳ  ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕ್ರೀಡಾಪಟುಗಳಿಗೆ ಪ್ರಥಮ ಚಿಕಿತ್ಸೆ ನೀಡುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.
ಪಥಸಂಚಲನದಲ್ಲಿ ಚಿತ್ರದುರ್ಗ, ದಾವಣಗರೆ, ಬೆಂಗಳೂರು, ತುಮಕೂರು, ಶಿವಮೊಗ್ಗ, ರಾಮನಗರ, ಮಧುಗಿರಿ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕ್ರೀಡಾ ತಂಡಗಳು ಭಾಗಿಯಾಗಿದ್ದವು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ಫಕ್ರುದ್ದೀನ್, ಅಂಗಡಿ ಮಂಜಣ್ಣ, ರಮೇಶ್, ಸುರೇಶ್, ಕೃಷ್ಣಪ್ಪ, ಭಾಗ್ಯಮ್ಮ, ಅನುರಾಧ, ನಾಗಮ್ಮ, ಮಂಜುಳಾ, ಪರಮೇಶ್, ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕ ಎಸ್.ಕೆ.ಬಿ ಪ್ರಸಾದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪರಶುರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೆ.ಸಂಪತ್‍ಕುಮಾರ್, ಚಿತ್ರದುರ್ಗ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಎ.ನೀಲಕಂಠಚಾರ್, ಚಳ್ಳಕೆರೆ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಎಸ್.ಶಿವಮೂರ್ತಿ, ಹಿರಿಯೂರು ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ವಿ.ಮನೋಹರ್, ಮೊಳಕಾಲ್ಮೂರು ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಿ.ಎಸ್.ಶಿವಕುಮಾರ್, ಹೊಸದುರ್ಗ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಕೆ.ಸತ್ಯನಾರಾಯಣ, ಹೊಳಲ್ಕೆರೆ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಟಿ.ತಿಪ್ಪೇಸ್ವಾಮಿ, ಪಾವಗಡದ ದೈಹಿಕ ಶಿಕ್ಷಣ ಅಧಿಕಾರಿ ಚಿದಾನಂದ ಸ್ವಾಮಿ, ಜಿ.ಎಸ್.ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಕೆ.ಹನುಮಂತಪ್ಪ, ಎಲ್.ಸಿ ಮಂಜುನಾಥ. ಡಿ.ಸುರೇಶ್, ಸರ್ಕಾರಿ ನೌಕರರ ಪ್ರಾಧಮಿಕ ಶಾಲಾ ಸಂಘದ ನಿರ್ದೇಶಕಿ ಕೆ.ಲತಾ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಧನಂಜಯರೆಡ್ಡಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಎಲ್ಲಾ ಸಂಘಗಳ ಜಿಲ್ಲಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *