ಬೆಂಗಳೂರು: ಇಂದು ಸಂಜೆ ನಡೆದ ಬೆಂಗಳೂರು ನಗರದ ಮಲ್ಲತ್ತಹಳ್ಳಿಯಲ್ಲಿ ಪಿ.ವಿ.ಪಿ. ಪಾಲಿಟೆಕ್ನಿಕ್ : ಡಾ. ಅಂಬೇಡ್ಕರ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ 67ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ನಿಮಿತ್ತವಾಗಿ ಅಪ್ಪು ಸ್ಮರಣೆ ಕಾರ್ಯಕ್ರಮ ನಡೆಯಿತು.
ನಂತರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಎಸ್.ಡಿ. ನಾಗೇಂದ್ರ ರವರು ನಾಡು, ನುಡಿ, ನೆಲ, ಜಲ, ಸಂಸ್ಕೃತಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಎಚ್.ಆರ್.ಭದ್ರಪ್ಪ ನವರು ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಗುರುಸ್ವಾಮಿ ರವರು ಹಾಗೂ ಸಿ.ಎಸ್. ಇ. ಸಿ. ವಿಭಾಗದ ಮಕ್ಕಳಿಂದ ಹಚೇವು ಕನ್ನಡದ ದೀಪ ಹಾಡು ಹಾಡಿದರು.
ಅಪ್ಪು ಅಮರ ಮತ್ತು ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಕ್ಕೆ ಗೌರವ:
ಕಾರ್ಯಕ್ರಮದಲ್ಲಿ ನಗುವಿನ ಅರಸ ಕರ್ನಾಟಕ ರತ್ನ ಡಾ. ಪುನಿತ್ ರಾಜ್ ಕುಮಾರ್ ರವರ ಅಪ್ಪು ಅಮರ ಎಂಬ ಶೀರ್ಷಿಕೆಯಲ್ಲಿ ಅಪ್ಪುಗೆ ಗೌರವ ಸೂಚಿಸಿ ‘ಗೊಂಬೆ ಹೇಳುತೈತೆ’ ಎಂಬ ಹಾಡಿಗೆ ಐ.ಎಸ್.ಟಿ ವಿಭಾಗದ ವಿದ್ಯಾರ್ಥಿಗಳು ಅಪ್ಪು ಭಾವಚಿತ್ರ ಹಾಗೂ ಕನ್ನಡ ಸಾಹಿತ್ಯದ ಎಂಟು ಜನ ಜ್ಞಾನಪೀಠ ಪುರಸ್ಕೃತರ ಭಾವಚಿತ್ರವನ್ನು ಹಿಡಿದು ನೃತ್ಯ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ನೆರೆದಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರ ಕಣ್ಣಂಚಲಿ ನೀರು ಜಿನುಗಿದವು. ಒಂದು ಕ್ಷಣ ಎಲ್ಲರೂ ಭಾವುಕರಾಗಿ ಮೌನಕ್ಕೆ ಶರಣಾದರು. ಅದೊಂದು ಅದ್ಭುತ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸತ್ಯನಾರಾಯಣ ದೀಕ್ಷಿತ್ ರವರು ಕಾರ್ಯಕ್ರಮದಲ್ಲಿ ಮಾತನಾಡಿ ಶುಭ ಹಾರೈಸಿದರು. ಮತ್ತು ಕಾರ್ಯಕ್ರಮದಲ್ಲಿ ಪಿ.ಎಸ್.ಚಂದ್ರಶೇಖರ್ ರವರು ವಿಶೇಷ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್.ಡಿ. ನಾಗೇಂದ್ರರವರು, ಸತ್ಯನಾರಾಯಣ ದೀಕ್ಷಿತ್, ಎಂ. ಎಸ್.ಪ್ರಕಾಶ್, ಎಂ.ಎಸ್. ಸವಿತಾ, ಎಲ್ಲಾ ಒಂಬತ್ತು ವಿಭಾಗದ ಮುಖ್ಯಸ್ಥರು, ಪಿ.ವಿ.ಪಿ. ಕಾಲೇಜಿನ ನೌಕರರ ಸಂಘದ ಅಧ್ಯಕ್ಷರಾದ ವಿ.ಸಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಹೇಮಂತ್ ಕುಮಾರ್, ಈ ಕಾರ್ಯಕ್ರಮದ ಆಯೋಜಕರಾದ ಶಿವಾನಂದ ಎಚ್.ಎಂ. ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.