ಚಿತ್ರದುರ್ಗ. ಜೂ.06: ಜಿಲ್ಲೆಯಲ್ಲಿ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಅಕ್ರಮವಾಗಿ ಗೋವು, ಒಂಟೆಗಳ ವಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಯವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ತಡೆಗಟ್ಟುವಿಕೆ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
2025-26ನೇ ಸಾಲಿನಲ್ಲಿ ಮೈಸೂರಿನ ಪಿಂಜಾರ್ ಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಹಾಗೂ ಸರ್ಕಾರಿ ಗೋಶಾಲೆಗೆ ಬೆಂಬಲ ನೀಡುವ ಕಾರ್ಯಕ್ರಮದಡಿ ಸರ್ಕಾರದಿಂದ ಅನುದಾನಕ್ಕಾಗಿ ಚಿತ್ರದುರ್ಗ ತಾಲ್ಲೂಕಿನ ಕಾತ್ರಾಳು ಕೆರೆಯ ಆದಿಚುಂಚನಗಿರಿ ಗೋಶಾಲೆ, ಮುತ್ತಯ್ಯನಹಟ್ಟಿಯ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ನ ರಾಜರಾಜೇಶ್ವರಿ ಗೋಶಾಲೆ, ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಬೊಮ್ಮದೇವರಹಟ್ಟಿಯ ಮುತೈಗಳ ಸ್ವಾಮಿ ಗೋಶಾಲೆ, ನಂದನಹಳ್ಳಿಯ ನಂದಾಮಸಂದ್ ಬಾವಾಜಿ ಪರಾಂಪರೆ ಶ್ರೀ ವೆಂಕಟೇಶ್ವರ ದೇವಸ್ಥಾನ ಬಾವಾಜಿ ಸೇವಾಶ್ರಮ ಹಾಗೂ ಸೇವಾಲಾಲ್ ದೇವರ ಹಸುಗಳ ಗೋ ರಕ್ಷಣಾ ಟ್ರಸ್ಟ್, ಹಿರೇಕೆರೆಕಾವಲು ಚೌಡೇಶ್ವರಿ ಗೋ ಸಂರಕ್ಷಣಾ ಟ್ರಸ್ಟ್, ನನ್ನಿವಾಳ ಕಟ್ಟೆಮನೆಯ ಮುತ್ತಿಗಾರ ದೇವರ ಎತ್ತುಗಳ ಕ್ಷೇಮಾಭಿವೃದ್ಧಿ ಟ್ರಸ್ಟ್, ನಾಯಕನಹಟ್ಟಿ ಹೋಬಳಿಯ ಗೌಡಗೆರೆಯ ಶ್ರೀರಂಗನಾಥ ಸ್ವಾಮಿ ದೇವರ ಎತ್ತುಗಳ ಗೋ ರಕ್ಷಣಾ ಟ್ರಸ್ಟ್, ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿ ಸಿದ್ದೇಶ್ವರ ಗೋಶಾಲೆ, ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ ಸ್ವರ್ಣಭೂಮಿ ಗೋಶಾಲೆ, ಐಮಂಗಲ ಹೋಬಳಿ ಗಿಡ್ಡೋಬನಹಳ್ಳಿಯ ಗೋ-ಸಕೇತ ಶ್ರೀರಾಮ ಮಂಡಳಿ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 10 ಗೋಶಾಲೆಯಿಂದ ಪ್ರಸ್ತಾವನೆಗಳು ಬಂದಿವೆ ಎಂದು ಸಭೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎನ್.ಕುಮಾರ್ ಮಾಹಿತಿ ನೀಡಿದರು. ನಿಯಮಾನುಸಾರ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.
ಕುರುಡಿಹಳ್ಳಿಯ ಪುಣ್ಯಕೋಟಿ ಸರ್ಕಾರಿ ಗೋಶಾಲೆಯ ಜಮೀನಿನಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸರ್ವೆ ನಂ.77ರ 9.36 ಎಕರೆ ಜಮೀನಿನಲ್ಲಿ ಹಳ್ಳ, ಗುಂಡಿ ಇರುವುದರಿಂದ ನೆಲಸಮತಟ್ಟು ಮಾಡಬೇಕಾಗಿದೆ. ಜಾನುವಾರುಗಳಿಗೆ ಪೌಷ್ಠಿಕ ಹಸಿರು ಮೇವು ಬೆಳೆಯಬಹುದು. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿಯಾಗಿ 100 ಜಾನುವಾರುಗಳಿಗೆ ಶೆಡ್ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಕುರುಡಿಹಳ್ಳಿ ಪುಣ್ಯಕೋಟಿ ಸರ್ಕಾರಿ ಗೋಶಾಲೆಯ ಉಸ್ತುವಾರಿ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಭೂಮಿಯನ್ನು ನೆಲಸಮತಟ್ಟು ಮಾಡಿಕೊಳ್ಳಲು ಜಿಲ್ಲಾ ಪಂಚಾಯತ್ ಕ್ರಮವಹಿಸಬೇಕು. ಹೆಚ್ಚುವರಿಯಾಗಿ ಜಾನುವಾರು ಶೆಡ್ ನಿರ್ಮಾಣ ಮಾಲು ಸರ್ಕಾರಕ್ಕೆ ಪ್ರಸ್ತಾವದ ಬೇಡಿಕೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಪ್ರಾಣಿದಯಾ ಸಂಘ ನವೀಕರಣಕ್ಕೆ ಅನುಮತಿ:
ಜಿಲ್ಲಾ ಪ್ರಾಣಿದಯಾ ಸಂಘವು ನೊಂದಾಯಿತ ಸಂಘವಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಪ್ರಾಣಿದಯಾ ಸಂಘದ ನವೀಕರಣಕ್ಕೆ ಸಭೆಯಲ್ಲಿ ಅನುಮತಿ ನೀಡಲಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಎನ್.ಗಿರಿರಾಜ್ ಸೇರಿದಂತೆ ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.






