ಚಿತ್ರದುರ್ಗ : ರಾಹುಲ್ ಗಾಂಧಿ ನಾಯಕತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಸದ್ಯ ಕರ್ನಾಟಕದಲ್ಲಿ ಯಾತ್ರೆ ಸಾಗುತ್ತಿದೆ. ಈ ಐಕ್ಯತಾ ಯಾತ್ರೆ ಬಗ್ಗೆ ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಕಿಡಿಕಾರಿದ್ದಾರೆ. ಭಾರತ್ ಜೋಡೋಗೆ ಏನಾದರೂ ಅರ್ಥವಿದೆಯಾ. ಇದನ್ನು ಧೈರ್ಯವಾಗಿ ಕಾಂಗ್ರೆಸ್ ಸಂಘಟನೆ ಅಂತ ಹೇಳಬಹುದು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹಿರಿಯೂರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕಿ, ಭಾರತ್ ಜೋಡೋ ಪಾದಯಾತ್ರೆ ಯಾವ ಕಾರಣಕ್ಕೆ ಹಮ್ಮಿಕೊಳ್ಳಲಾಗಿದೆ. ಭಾರತ್ ಜೋಡೋ ಎಂದರೇ ಭಾರತ ಪುಡಿ ಪುಡಿಯಾಗಿರುವುದನ್ನು ಒಂದು ಮಾಡುವುದು. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ದೇಶವನ್ನು ಪುಡಿ ಪುಡಿ ಮಾಡುವ ಪ್ರಯತ್ನ ಇತ್ತು. ಇಂತಹ ಸಂದರ್ಭದಲ್ಲಿ ಈಗಿನ ನಮ್ಮ ಪ್ರಧಾನಿ ಅವರ ನೇತೃತ್ವದಲ್ಲಿ ದೇಶ ಸುಭದ್ರವಾಗಿದೆ ಎಂದು ತಿಳಿಸಿದರು.
ತಾವು ದೇಶ ಕಾಯುವ ಯೋಧರಿಗೆ ಯಾವ ಯಾವ ಯೋಜನೆಗಳನ್ನು ಕೊಡಲು ನಿಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ. ಅಂತಹ ಯೋಜನೆಗಳಿಗೆ ಹೆಚ್ಚು ಶಕ್ತಿಯನ್ನು ಪ್ರಧಾನಿ ಮೋದಿಜೀಯವರು ತುಂಬಿದ್ದಾರೆ. ಇತರೇ ರಾಷ್ಟ್ರಗಳು ಭಾರತದ ಬಗ್ಗೆ ಅತಿ ಗೌರವದಿಂದ ನಡೆದುಕೊಳ್ಳುವ ರೀತಿ ಕಳೆದ ಎಂಟು ವರ್ಷಗಳಿಂದ ಪ್ರಧಾನಿ ಕಾರ್ಯವೈಖರಿಯಿಂದ ನಡೆಯುತ್ತಿದೆ. ಆರ್ಟಿಕಲ್ 370 ರದ್ದು ಹಾಗೂ ದೇಶ ದ್ರೋಹ ಕೆಲಸ ಮಾಡುವ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡುವುದನ್ನು ಮೋದಿಯವರು ನಿರ್ಧಾರ ಮಾಡಿದ್ದಾರೆ ಎಂದರು.
ದೇಶದಲ್ಲಿ ತಮ್ಮ ಆಡಳಿತ ಇದ್ದಾಗ ಇಂತಹ ನಿರ್ಧಾರಗಳನ್ನು ಯಾಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು. ದೇಶವನ್ನು ಇಬ್ಭಾಗ ಮಾಡುವ ಕೆಲಸ ಮಾಡಿದ ತಾವುಗಳು ಈಗ ಭಾರತ್ ಜೋಡೋ ಹಮ್ಮಿಕೊಂಡು ದೇಶದ ಹೆಸರಿನಲ್ಲಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನೀವು ಧೈರ್ಯವಾಗಿ ಹೇಳಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡ್ತಿದಿವಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ಏನೇ ಮಾಡಿದರೂ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.