ಚಿತ್ರದುರ್ಗ, (ಡಿಸೆಂಬರ್.17) : 2021-22ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಜನವರಿ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 2021-22ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ 3377/-ರೂಗಳ ಬೆಂಬಲ ಬೆಲೆಯನ್ನು ನಿಗಧಿಮಾಡಲಾಗಿದೆ ಮತ್ತು 50 ಕೆ.ಜಿ ತೂಕವುಳ್ಳ ಗೋಣಿ ಚೀಲದ ವೆಚ್ಚವಾಗಿ 22/-ರೂಗಳಂತೆ ನೀಡಲಾಗುತ್ತದೆ. ಇದರ ನೋಂದಣಿಗೆ ಪ್ರೂಟ್ಸ್ ದತ್ತಾಂಶದಂತೆ ಇದರ ನೋಂದಣಿ ಮಾಡಲಾಗುತ್ತದೆ. ರೈತರು 2022ರ ಜನವರಿ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಾಯಿಸಿಕೊಳ್ಳಬೇಕು. ರಾಗಿ ಖರೀದಿಗೆ ಚಿತ್ರದುರ್ಗದ ಎಪಿಎಂಸಿ, ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಎಪಿಎಂಸಿಯಲ್ಲಿ ತಲಾ ಒಂದು ಖರೀದಿ, ಹೊಸದುರ್ಗ ಎಪಿಎಂಸಿ ಆವರಣದಲ್ಲಿ ನಾಲ್ಕು ಹೋಬಳಿಗಳಿಂದ ಎರಡು ಹೋಬಳಿಗೊಂದರಂತೆ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಚಿತ್ರದುರ್ಗ 2204, ಚಳ್ಳಕೆರೆ 518, ಹಿರಿಯೂರು 2763, ಹೊಳಲ್ಕೆರೆ 4429, ಹೊಸದುರ್ಗ 33,531 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 332 ಹೆಕ್ಟೇರ್ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 43777 ಹೆಕ್ಟೇರ್ ರಾಗಿ ಬಿತ್ತನೆಯಾಗಿದ್ದು, ಇದರಿಂದ 32559 ಮೆಟ್ರಿಕ್ ಟನ್ ರಾಗಿ ಉತ್ಪಾದನೆಯ ಗುರಿ ಹೊಂದಲಾಗಿದೆ.
ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಎಕೆರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿಯನ್ನು ಖರೀಸಲಾಗುತ್ತದೆ. ರಾಗಿ ಖರೀದಿ ಕೇಂದ್ರಕ್ಕೆ ತರುವಾಗ ಎಫ್‍ಎಕ್ಯೂ ಗುಣಮಟ್ಟವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದ ಅವರು, ರಾಗಿ ಖರೀದಿಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರೈತರಿಂದ ಖರೀದಿಸಲು ಏಜೆನ್ಸಿಯಾಗಿ ನೇಮಕ ಮಾಡಲಾಗಿರುತ್ತದೆ. ಕೃಷಿ ಇಲಾಖೆಯಿಂದ ಪ್ರತಿ ಖರೀದಿ ಕೇಂದ್ರಗಳಲ್ಲಿ ಇಲಾಖೆಯ ಗ್ರೇಡರ್‍ಗಳನ್ನು ನೇಮಿಸಬೇಕು ಮತ್ತು ಸಂಗ್ರಹಣೆಗೆ ಅಗತ್ಯ ಗೋದಾಮುಗಳನ್ನು ಸಿದ್ದಮಾಡಿಟ್ಟುಕೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.