ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ(ಡಿ.05) : ಸಾರಿಗೆ ಇಲಾಖೆಯಲ್ಲಿ ಸಂಪೂರ್ಣ ಬದಲಾವಣೆ ತರಲು ಚಿಂತಿಸಲಾಗಿದೆ. ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ ಖರೀದಿ ಮುನ್ನುಡಿ ಬರೆಯಲಾಗಿದೆ. 2030ರ ವೇಳೆಗೆ ಹಳೆಯ 30 ಸಾವಿರ ಸಾರಿಗೆ ಬಸ್‌ಗಳಿಗೆ ಬದಲಾಗಿ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸಲಾಗುವುದು. ಜನವರಿ ಅಂತ್ಯದ ವೇಳೆಗೆ 50 ವಿದ್ಯುತ್ ಚಾಲಿತ, 600 ಡೀಸೆಲ್ ಚಾಲಿತ, 60 ವೋಲ್ವೋ ಬಸ್ ಖರೀದಿಸಾಗುತ್ತಿದೆ ಎಂದು ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ಹಿರಿಯೂರು ನಗರದ ಹುಳಿಯಾರ ರಸ್ತೆಯ ತಾಲ್ಲೂಕು ಕ್ರೀಡಾಂಗಣದ ಹತ್ತಿರ ಮಂಗಳವಾರ ನೂತನ ಬಸ್ ಘಟಕದ ಶಂಕುಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಅಡಿ ರೂ.250 ಕೋಟಿ ಅನುದಾನ ನೀಡಿದೆ. ರಾಜ್ಯಾದ್ಯಂತ ರಸ್ತೆ ಅಪಘಾತ ತಡೆಯಲು ಬ್ಲಾಕ್ ಸ್ಪಾಟ್ ಗುರುತಿಸಲಾಗುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ ಎಂದರು.
ಹಿರಿಯೂರು ಶಾಸಕರಾದ ಸಹೋದರಿ ಪೂರ್ಣಿಮಾ ಶ್ರೀನಿವಾಸ ಬಹಳ ದಿನಗಳಿಂದ ಬಸ್ ಡಿಪೋ ನಿರ್ಮಾಣಕ್ಕೆ ದುಂಬಾಲು ಬಿದ್ದಿದ್ದರು. ಇಂದು ರೂ. 6 ಕೋಟಿ ವೆಚ್ಚದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಾಸಕಿ ಪೂರ್ಣಿಮಾ ಕಾಲ್ಗುಣದಿಂದ ವಿ.ವಿ.ಸಾಗರ ಭರ್ತಿಯಾಗಿದೆ. ಭದ್ರಾದಿಂದ ನೀರು ಹರಿಯುತ್ತಿದೆ. ವೇದಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಭಾಗದ 4 ಲಕ್ಷ ಬೋರ್ ವೆಲ್ ರೀಚಾರ್ಜ್ ಆಗಿವೆ. ಶಾಸಕಿಯಾಗಿ ತಾಲ್ಲೂಕಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚು 11 ಸಾವಿರ ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದಾರೆ. ಹಿರಿಯೂರು ನಗರ ಸುಂದರೀಕರಣಕ್ಕೆ ಒತ್ತು ನೀಡಿದ್ದಾರೆ.ರೂ. 150 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ರೂ. 10 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಡಳಿತ ಭವನ ಅನುದಾನ ತಂದಿದ್ದಾರೆ. ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ನಗರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ ಎಂದರು.
*ಶೀಘ್ರದಲ್ಲೇ ಸಾರಿಗೆ ಸಿಬ್ಬಂದಿಗೆ ವೇತನ ಪರಿಷ್ಕರಣೆ*
ಸಾರಿಗೆ ನೌಕರರ ಬಹುದಿನದ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಹಿಂದೆ 2015-16 ನೇ ಸಾಲಿನಲ್ಲಿ ವೇತನ ಪರಿಷ್ಕರಣೆಯಾಗಿತ್ತು. ಆದರೆ ಇಲ್ಲಿಯವರೆಗೂ ವೇತನ ಪರಿಷ್ಕರಣೆ ಆಗಿರುವುದಿಲ್ಲ. ಸಾರಿಗೆ ಸಿಬ್ಬಂದಿ ಯೂನಿಯನ್‌ಗಳು ಈ ಕುರಿತು ಗಮನ ಸೆಳೆದಿವೆ. ಸರ್ಕಾರ ಸಿಬ್ಬಂದಿ ವೇತನ ಪರಿಷ್ಕರಣೆ ಸಿದ್ದವಿದೆ. ಸರ್ಕಾರದಿಂದ ಸಾರಿಗೆ ಸಿಬ್ಬಂದಿಗೆ ರೂ.1ಕೋಟಿ ಮೊತ್ತದ ಜೀವವಿಮೆ ನೀಡಲಾಗಿದೆ. ನೌಕರರು ಕರ್ತವ್ಯದ ವೇಳೆ ಅಥವಾ ಅನ್ಯ ಸಂದರ್ಭದಲ್ಲಿ ಮೃತರಾದರೆ ವಿಮೆ ಪಾವತಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಪೂರ್ಣಿಮಾ ಕೆ. ಶ್ರೀನಿವಾಸ್, ಬಹಳ ನಿರೀಕ್ಷೆಯಿಂದ ಕಾಯುತ್ತಾ ಇದ್ದ ಬಸ್ ಡಿಪೋ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 2018 ರಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಬಹುತೇಕ ಈಡೇರಿಸಲಾಗಿದೆ ಎಂದರು.
ಎರಡು ತಿಂಗಳ ಹಿಂದೆ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾತು. ಸಾರಿಗೆ ನಿಗಮ ಅಧ್ಯಕ್ಷರಾದ ಎಂ.ಚಂದ್ರಪ್ಪ ಅವರಿಗೆ ಧನ್ಯವಾದಗಳು. ಅನೇಕ ಕಾರ್ಯಕ್ರಮ ಜಾಗ ಮಂಜೂರು ಆದ ತಕ್ಷಣ ಡಿಪೋ ನಿರ್ಮಾಣವಾಗಲ್ಲ. ಇದಕ್ಕೆ ಬೇಕಾದ ಅನುದಾನವನ್ನು ಸರ್ಕಾರದಿಂದ ತರಲಾಗಿದೆ ಎಂದರು.
ರೂ.100 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು, ರೂ.25 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಸ್ಪತ್ರೆ ನಿರ್ಮಾಣ, ಸರ್ಕಾರ ರೂ.7000 ಕೋಟಿಗಳನ್ನು ಶಾಲೆಗಳ ಕೊಠಡಿಗಳ ನಿರ್ಮಾಣ ಮಂಜೂರು ಮಾಡಿದೆ. ಎಸ್.ಸಿ, ಎಸ್.ಟಿ ಆರ್ಥಿಕವಾಗಿ ದುರ್ಬಲರಿಗೆ ಉಚಿತ 75 ಯುನಿಟ್ ವಿದ್ಯುತ್ ನೀಡಲಾಗಿದೆ. ಹಿರಿಯೂರು ಕ್ಷೇತ್ತ ವ್ಯಾಪ್ತಿಯಲ್ಲಿ, 4500 ಅಲೆಮಾರಿಗಳಿಗೆ ಮನೆ, 3200 ಎಸ್.ಸಿ ಹಾಗೂ ಎಸ್.ಟಿ, 1048 ನಿವೇಶನ ರಹಿತರಿಗೆ, ಕೊಳಚೆ ಮಂಡಳಿಯಿಂದ 725 ಹಾಗೂ 425 ಮನೆಗಳನ್ನು ನಿರ್ಮಾಣ ಮಾಡಗುತ್ತಿದೆ. ಪರಿಶಿಷ್ಟ ವರ್ಗಗಳ ಇಲಾಖೆಯಿಂದ 5 ಕೋಟಿ ರಸ್ತೆ, 5 ಕೋಟಿ ಬೀದಿ ದೀಪ, 12 ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮುಂಗಾರು ಹಂಗಾಮಿನಿನಲ್ಲಿ ಮಳೆಯಿಂದ ಹಾನಿಗೊಳಾದ ಮನೆಯ ಮಾಲೀಕರಿಗೆ ರೂ.50 ಸಾವಿರ ಪರಿಹಾರ ನೀಡುವ ಆದೇಶ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷ ಹೆಚ್.ಎಂ. ಗುಂಡೇಶ ಕುಮಾರ್, ಕ.ರಾ.ರ.ಸಾ.ನಿಗಮ ಮಂಡಳಿ ನಿರ್ದೇಶಕರುಗಳಾದ ಪಿ. ರುದ್ರೇಶ್, ಆರುಂಡಿ ನಾಗರಾಜ್,ರಾಜು ವಿಠಲಸ ಜರತಾರಘರ, ಡಿ.ವೈ.ಎಸ್.ಪಿ ರೋಷನ್ ಜಮೀರ್, ತಹಶೀಲ್ದಾರ್ ಪ್ರಶಾಂತ ಕೆ ಪಾಟೀಲ್, ತಾ.ಪಂ.ಇಓ ಈಶ್ವರ ಪ್ರಸಾದ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ತಿಮ್ಮಯ್ಯ ಸೇರಿದಂತೆ ನಗರ ಸಭೆ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು ಇದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ಸ್ವಾಗತಿಸಿದರು.