ಅಕ್ಟೋಬರ್ 29 ನೆನಪಿಸಿಕೊಳ್ಳುವುದಕ್ಕೆ ಮನಸ್ಸಿಗೆ ದುಃಖವಾಗುತ್ತದೆ. ಕಳೆದ ವರ್ಷ ಇದೇ ದಿನ ಎಲ್ಲರೂ ಖುಷಿಯಲ್ಲಿ ತೇಲುತ್ತಿದ್ದರು. ಅಂದು ದೊಡ್ಮನೆ ಕುಡಿ ಶಿವಣ್ಣನ ಭಜರಂಗಿ 2 ಸಿನಿಮಾ ರಿಲೀಸ್ ಆಗಿತ್ತು. ಆ ಸಂತಸ ಅಭಿಮಾನಿಗಳು ಹಾಗೂ ಅಣ್ಣಾವ್ರ ಕುಟುಂಬದಲ್ಲಿ ಮನೆ ಮಾಡಿತ್ತು. ಅಪ್ಪು ಅಣ್ಣನಿಗೆ ವಿಶ್ ಕೂಡ ಮಾಡಿದ್ದರು. ಆದರೆ ಅದ್ಯಾಕೋ ಆ ವಿಶ್ ಕಡೆಯ ವಿಶ್ ಆಗೋಗಿತ್ತು.
ಸಿನಿಮಾ ನೋಡುತ್ತಿದ್ದ ಶಿವಣ್ಣನಿಗೆ ಬಂದ ಆ ಒಂದು ಕರೆಯಿಂದ ಶಿವಣ್ಣ ನಡುಗಿ ಹೋಗಿದ್ದರು. ನೋಡ ನೋಡುತ್ತಾ ವಿಚಾರ ಎಲ್ಲಾ ಕಡೆ ಹಬ್ಬಿತ್ತು. ಅಪ್ಪು ಇನ್ನಿಲ್ಲವಂತೆ. ಸಾಧ್ಯವಾ ನಂಬುವುದಕ್ಕೆ. ಈ ವಿಚಾರ ಹೇಳಿದವರಿಗೆ ಕೇಳಿದವರು ಬೈದದ್ದು ಉಂಟು. ಅದೇನು ಮಾತು ಅಂತ ಆಡ್ತೀರಾ ಅಂತ. ಆದ್ರೆ ವಿಧಿಗೆ ಈ ಮಾತು ಕೇಳಿಸಿರಲಿಲ್ಲ. ಅದು ತನ್ನಷ್ಟಕ್ಕೆ ತಾನು ಅಪ್ಪುರನ್ನು ಅಪ್ಪಿ ಕರೆದುಕೊಂಡು ಹೋಗಿತ್ತು.
ಮಧ್ಯಾಹ್ನದ ಹೊತ್ತಿಗೆ ವಿಚಾರ ಕನ್ಫರ್ಮ್ ಆಗಿತ್ತು. ಕರ್ನಾಟಕದ ಮನೆ ಮಂದಿಯೆಲ್ಲಾ ದೇವರ ಬಳಿ ಬೇಡಿಕೊಂಡಿದ್ದರು. ಕೇಳಿದ ಸುದ್ದಿ ಸುಳ್ಳಾಗಲಿ ಎಂದು ಆದರೆ ಅದು ನಿಜವಾಗಿಯೇ ಹೋಯ್ತು. ಅಪ್ಪು ಎಲ್ಲರನ್ನು ಅಗಲಿ ದೂರ ಹೋಗಿ ಬಿಟ್ಟರು. ಅಪ್ಪು ಅಭಿಮಾನಿಯಾಗದೆ ಇದ್ದವರಿಗೂ ಈ ದುಃಖ ತಡೆದುಕೊಳ್ಳಲಾಗಲಿಲ್ಲ. ಪ್ರತಯೊಬ್ಬರ ಮನಸ್ಸು ಕರಗಿತ್ತು, ದುಃಖ ಉಮ್ಮಳಿಸಿ ಬಂದಿತ್ತು. ಆ ಕೆಟ್ಟ, ಕರಾಳ ದಿನಕ್ಕೆ ಭರ್ತಿ ಒಂದು ವರ್ಷ
ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅಗಲಿ ಒಂದು ವರ್ಷ. ಇಂದು ಪ್ರಥಮ ವರ್ಷೆ ಪುಣ್ಯಸ್ಮರಣೆ. ಆದ್ರೆ ಈಗಲೂ ಆ ವಿಚಾರ ಅರಗಿಸಿಕೊಳ್ಳಲಾಗುತ್ತಿಲ್ಲ. ಅಭಿಮಾನಿಗಳ ಕಣ್ಣೀರು ಬತ್ತಿಲ್ಲ. ಅಪ್ಪು ಬೇಕು ಎಂಬ ಹಠ ಮನಸ್ಸು ಮಾಡುತ್ತಿದೆ. ಅಪ್ಪುಗೆ ದೇವರು ಮತ್ತೊಂದು ಚಾನ್ಸ್ ಕೊಡಬೇಕಿತ್ತು ಎನಿಸುತ್ತಿದೆ. ಈ ನೋವಿನಲ್ಲಿಯೇ ಅಭಿಮಾನಿಗಳು ಇಂದು ಸಾಗರೋಪಾದಿಯಲ್ಲಿ ಸಮಾಧಿ ಬಳಿ ಬಂದು ದರ್ಶನ ಪಡೆಯುತ್ತಿದ್ದಾರೆ.