ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟು ಹಬ್ಬ. ಡಾ.ರಾಜ್‍ಕುಮಾರ್ ಸ್ಮಾರಕ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಲವು ಬಗೆಯ ಹೂಗಳಿಂದ ಸ್ಮಾರಕ ಕಂಗೊಳಿಸುತ್ತಿದೆ. ಪುನೀತ್ ರಾಜ್‍ಕುಮಾರ್ ಅವರ ಸ್ಮಾರಕವನ್ನು ಹೂಗಳಿಂದಾನೇ ಅಲಂಕಾರ ಮಾಡಿದ್ದು, ಮಂಟಪದಂತೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗ್ಗೆಯಿಂದಾನೇ ಅಭಿಮಾನಿಗಳು ಎಲ್ಲಾ ಜಿಲ್ಲೆಗಳಿಂದ ಬಂದು ಅಪ್ಪು ಸ್ಮಾರಕಕ್ಕೆ ಹೂಗಳನ್ನಿಟ್ಟು, ಪೂಜೆ ಸಲ್ಲಿಸಿದ್ದಾರೆ.

ಇನ್ನು ಕುಟುಂಬಸ್ಥರು ಕೂಡ ಅಪ್ಪು ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್‍ಕುಮಾರ್, ಅವರ ಪತ್ನಿ ಮಂಗಳಾ, ಅಶ್ವಿನಿ ಪುನೀತ್ ರಾಜ್‍ಕುಮಾರ್, ಮಕ್ಕಳು ಧೃತಿ, ವಂದಿತಾ ಕೂಡ ತಂದೆಗೆ ಏನೆಲ್ಲಾ ತಿನಿಸುಗಳು ಇಷ್ಟ ಎಂಬುದನ್ನು ತಂದು ಸ್ಮಾರಕದ ಮುಂದೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಅಣ್ಣಾವ್ರ ಸ್ಮಾರಕ, ಪಾರ್ವತಮ್ಮನವರ ಸ್ಮಾರಕಕ್ಕೂ ಪೂಜೆ ಸಲ್ಲಿಸಿ, ಬಂದಿದ್ದಂತ ಅಭಿಮಾನಿಗಳಿಗೆ ಅನ್ನದಾನ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

ಇಂದು ರಾಜ್ಯದ ಮೂಲೆಮೂಲೆಯಿಂದಾನೂ ಬಂದಿದ್ದ ಅಭಿಮಾನಿಗಳು ಅಪ್ಪು ಕಂಡು ಕಣ್ತುಂಬಿಕೊಂಡರು. ಫೋಟೋ ಫ್ರೇಮ್ ಗಳನ್ನ ತಂದಿದ್ದರು, ಬಟ್ಟೆ ಮೇಲೆ ಅಪ್ಪು ಚಿತ್ರವನ್ನ ಮುದ್ರಿಸಿಕೊಂಡಿದ್ದರು, ಎದೆ ಮೇಲೆ ಅಪ್ಪು ಟ್ಯಾಟೂ ಹಾಕಿಸಿಕೊಂಡಿದ್ದರು. ಅಪ್ಪು ಮೇಲಿನ ಅಭಿಮಾನವನ್ನ ವ್ಯಕ್ತಪಡಿಸುವುದು ಒಂದೊಂದು ರೀತಿಯಲ್ಲಲ್ಲ. ಅಪ್ಪು ಎಂದರೆ ನಗುವಿನ ಒಡೆಯ. ಆ ನಗುವಿನ ಒಡೆಯನಿಗೆ ಎಲ್ಲರೂ ಗೌರವಪೂರ್ವಕವಾಗಿ ನಮಿಸಿದರು. ಅಪ್ಪು ದಾನ ಧರ್ಮದಲ್ಲಿ ಎತ್ತಿದ ಕೈ. ಅವರ ಅಭಿಮಾನಿಗಳು ಆ ದಾರಿಯಲ್ಲಿಯೇ ಸಾಗುತ್ತಿದ್ದಾರೆ. ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿದ್ದಾರೆ. ಹಸಿದು ಬಂದವರಿಗೆ ಅನ್ನ ನೀಡಿ ಸಂತೃಪ್ತಿಗೊಳಿಸುತ್ತಿದ್ದಾರೆ.

