ಫೆ.27 ರಿಂದ ಮಾರ್ಚ್ 02 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ :  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

2 Min Read

 

ಚಿತ್ರದುರ್ಗ,(ಫೆಬ್ರವರಿ.25) : ರಾಷ್ಟ್ರೀಯ ಪಲ್ಸ್‍ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಇದೇ ಫೆಬ್ರವರಿ 27 ರಿಂದ ಮಾರ್ಚ್ 02 ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಐದು ವರ್ಷದೊಳಗಿನ 1,50,054 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಫೆ.27ರಂದು ಪೋಲಿಯೋ ಭಾನುವಾರ ಎಂದು ಘೋಷಣೆ ಮಾಡಲಾಗಿದ್ದು, ಹುಟ್ಟಿದ ಮಗುವಿನಿಂದ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಲಾವುದು. ಈಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಅಂದು ಪುನಃ ಫೋಲಿಯೋ ಲಸಿಕೆಯನ್ನು ತಪ್ಪದೇ ಹಾಕಿಸಬೇಕು. ಪೋಲಿಯೋ ಬೂತ್ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪಲ್ಸ್ ಫೋಲಿಯೋ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಫೆಬ್ರವರಿ 27ರಂದು ಲಸಿಕಾ ಕೇಂದ್ರಗಳಲ್ಲಿಯೇ ಪೋಲಿಯೋ ಲಸಿಕೆ ಹಾಕಲಾಗುವುದು. ನಂತರದ ದಿನಗಳಲ್ಲಿ ಫೆ.28ರಿಂದ ಮಾರ್ಚ್ 02 ರವರೆಗೆ ಮನೆ ಮನೆಗೆ ಭೇಟಿ ನೀಡುವುದರ ಮೂಲಕ ಲಸಿಕೆ ಹಾಕಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, 2014ರಲ್ಲಿ ಭಾರತ ಫೋಲಿಯೋ ಮುಕ್ತ ಭಾರತ ಎಂದು ಘೋಷಣೆಯಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜೊತೆಯಲ್ಲಿಯೇ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ನೆರೆಯ ಪಾಕಿಸ್ತಾನ, ಅಪಘಾನಿಸ್ತಾನ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ದಾಖಲಾಗುತ್ತಿರುವ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣವಾಗಿ ವೈರಸ್‍ನ್ನು ಹೋಗಲಾಡಿಸಲು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ವಿಶೇಷವಾಗಿ ಎರಡು ಸುತ್ತಗಳಲ್ಲಿ ಮಾಡಲಾಗುತ್ತಿದೆ ಎಂದರು.

1995ರಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಾರಂಭವಾಯಿತು. 2011ರಲ್ಲಿ ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ದಾಖಲಾದ ನಂತರ 2014ರಲ್ಲಿ ಪೋಲಿಯೋ ಮುಕ್ತ ದೇಶ ಎಂದು ಘೋಷಣೆ ಮಾಡಲಾಯಿತು. 2015ರಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಹನಿ ಜೊತೆಗೆ ಐಪಿವಿ ಚುಚ್ಚುಮದ್ದು ಪ್ರಾರಂಭ ಮಾಡಲಾಯಿತು.

2021ರಲ್ಲಿ ಜಿಲ್ಲೆಯಲ್ಲಿ 1,52,852 ಗುರಿಯಲ್ಲಿ 1,56,132 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಶೇ.102.82ರಷ್ಟು ಸಾಧನೆ ಮಾಡಲಾಗಿದೆ.  ಜಿಲ್ಲೆಯ ಐದು ವರ್ಷದೊಳಗಿನ 1,50,054 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 1091 ಬೂತ್, 71 ಟ್ರಾನ್ಸಿಟ್ ಪಾಯಿಂಟ್ ಮತ್ತು 16 ಮೊಬೈಲ್ ತಂಡಗಳ ಮೂಲಕ ಫೋಲಿಯೋ ಲಸಿಕೆ ಹಾಕಲಾಗುತ್ತದೆ. ಈ ಸಂಬಂಧ ಅನೇಕ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2355 ವ್ಯಾಕ್ಸಿನೇಟರ್‍ಗಳು, 254 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *