ಹೈದರಬಾದ್: ತೆಲಂಗಾಣದ ಮುನಗೋಡು ಕ್ಷೇತ್ರದ ಮರ್ರಿಗುಡ ಎಂಬಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಮಾಧಿಯನ್ನು ನಿರ್ಮಾಣ ಮಾಡಲಾಗಿದೆ. ಸಮಾಧಿ ಮೇಲೆ ಜೆ ಪಿ ನಡ್ಡಾ ಅವರ ಫೋಟೋ ಇಟ್ಟು ಪೂಜೆ ಕೂಡ ಮಾಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಸಾಕಷ್ಟು ವೈರಲ್ ಆಗಿದೆ.
ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕಾರಣ ಆಕ್ರೋಶಗೊಂಡ ಸ್ಥಳೀಯರು ಅವರ ಫೋಟೋ ಇಟ್ಟು ಸಮಾಧಿ ಕಟ್ಟಿಸಿದ್ದಾರೆ. 2016ರಲ್ಲಿ ಜೆಪಿ ನಡ್ಡಾ ಅವರು ಸಚಿವರಾಗಿದ್ದಾಗ ಮರ್ರಿಗುಡ್ಡ ಕ್ಷೇತ್ರಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ತಿಳಿಸಿದ್ದರು. ಆದರೆ ಇಲ್ಲಿವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ರಿಲೀಸ್ ಆಗಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶಗೊಂಡ ಜನ ಈ ರೀತಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಟ್ವೀಟ್ ಮಾಡಿದ್ದು, ಟಿ ಎಸ್ ಆರ್ ಪಕ್ಷದ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಮಾಧಿ ನಿರ್ಮಾಣ ಮಾಡಿದ್ದಾರೆ. ಸಮಾಧಿ ಮೇಲೆ ಫೋಟೋ ಹಾಕಿರುವುದನ್ನು ಒಪ್ಪಲಾಗುವುದಿಲ್ಲ. ತೆಲಂಗಾಣದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಟಿ ಎಸ್ ಆರ್ ಗೆ ಸಹಿಸಲು ಆಗುತ್ತಿಲ್ಲ. ಹತಾಶೆಗೊಂಡವರಂತೆ ಈ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.