ಚಿತ್ರದುರ್ಗ, (ಡಿ.15) : ಪದವಿ ಪೂರ್ವ ಶಿಕ್ಷಣದ ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡಲು ಪೂರಕ ವಾತಾವರಣ ಕಲ್ಪಿಸಬೇಕೆದು ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಗ್ಲೀಷ್ ಕಾರಣಕ್ಕೆ ಹಳ್ಳಿಗಾಡಿನ, ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ವಿಜ್ಞಾನದ ವಿಷಯದಿಂದ ವಿಮುಖರಾಗಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಹೇಳಿದರು.
ವಿಜ್ಞಾನದ ವಿಷಯವನ್ನು ಇಂಗ್ಲೀಷ್‍ನಲ್ಲಿಯೇ ಕಲಿಯಬೇಕೆಂದೇನಿಲ್ಲ. ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಂಖ ಗ್ರಾಮದಲ್ಲಿ ಪಿಯು ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡಲಾಗುತ್ತಿದೆ. ಈ ಕಾಲೇಜಿನಲ್ಲಿನ 80 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಅವರಲ್ಲಿ ಪ್ರತಿ ವರ್ಷ ಹತ್ತು ಮಂದಿ ಮೆಡಿಕಲ್ , 30 ಮಂದಿ ಇಂಜಿನಿಯರಿಂಗ್‍ಗೆ ಹೋಗುತ್ತಿದ್ದಾರೆ. ಮರಾಠಿ ನೆಲದಲ್ಲಿ ಕನ್ನಡದಲ್ಲಿ ಪಿಯುಸಿ ಓದಿದವರು ವೃತ್ತಿ ಶಿಕ್ಷಣದಲ್ಲಿ ಪಾಲುದಾರಿಕೆ ಪಡೆಯುವುದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗುವುದಿಲ್ಲವೆಂದು ಪ್ರಶ್ನಿಸಿದರು.
ಮಹಾರಾಷ್ಟ್ರದ ಸಂಖದಲ್ಲಿ ಕನ್ನಡ ಮಾಧ್ಯಮದ ಪಿಯು ಕಾಲೇಜು ಉತ್ತಮವಾಗಿ ನಡೆಯುತ್ತಿದೆ,
ಒಳ್ಳೆಯ ಫಲಿತಾಂಶ ಬರುತ್ತಿದೆ ಎಂಬ ವಿಷಯ ತಿಳಿದು ವಾಸ್ತಂವಾಶ ಅರಿಯಲು ಅಧ್ಯಯನ ಪ್ರವಾಸ ಕೈಗೊಳ್ಳಲಾಗಿತ್ತು. ಕನ್ನಡದಲ್ಲಿ ಪಠ್ಯ ಪುಸ್ತಕ ಇಲ್ಲದಿದ್ದರೂ ಅಲ್ಲಿನ ಉಪನ್ಯಾಸಕರು ತಾವೇ ಪಠ್ಯ ಸಿದ್ದಪಡಿಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ. ಇಡೀ ರಾಜ್ಯಕ್ಕೆ ಅದೊಂದೇ ಕನ್ನಡದಲ್ಲಿ ಪಾಠ ಮಾಡುವ ಪಿಯು ವಿಜ್ಞಾನ ಕಾಲೇಜು ಆಗಿದ್ದು ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ಅಧ್ಯಯನದಲ್ಲಿ ತೊಡಗಿದ್ದಾರೆ. ಉತ್ತಮ ಪ್ರಯೋಗಾಲಯ ಇರುವ ಈ ಕಾಲೇಜಲ್ಲಿ ಸಹಜವಾಗಿಯೇ ಶೇ.100 ರಷ್ಟು ಫಲಿತಾಂಶ ಬರುತ್ತಿದೆ.
ಪಿಯು ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡುವ ಸಂಬಂಧ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಅದೇ ವಾತಾವರಣ ಸೃಷ್ಠಿಸಲು ಆಲೋಚನೆ ಮಾಡಲಾಗಿದೆ. ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಚರ್ಚಿಸಿ ಮನವೊಲಿಸಲಾಗುವುದು. ಆಡಳಿತ ಯಂತ್ರವ ಸೇರಿಸಿಕೊಂಡು ಭವಿಷ್ಯದಲ್ಲಿ ಪಿಯು ವಿಜ್ಞಾನವನ್ನು ಕನ್ನಡದಲ್ಲಿ ಬೋಧನೆ ಮಾಡುವ ಸರಳ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಲಾಗುವುದೆಂದು ಯಾದವರೆಡ್ಡಿ ಹೇಳಿದರು.
ತಮಿಳು ನಾಡು ರಾಜ್ಯದಲ್ಲಿ ಈಗಾಗಲೇ ಪಿಯು ವಿಜ್ಞಾನವನ್ನು ತಮಿಳಿನಲ್ಲಿ ಬೋಧನೆ ಮಾಡಲಾಗುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಪಠ್ಯ ಕೂಡಾ ತಮಿಳಿನಲ್ಲಿದೆ. ಮಾತೃ ಭಾಷೆಯಲ್ಲಿ ವೃತ್ತಿ ಶಿಕ್ಷಣ ಕಲಿಯುವ ಅವಕಾಶವಿದ್ದರೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಪಟ್ಟಣದವರೊಂದಿಗೆ ಸ್ಪರ್ಧೆಗಿಳಿಯಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಮಹರಾಷ್ಟ್ರದ ಸಂಖ ಕಾಲೇಜಿನ ವಿಜ್ಞಾನ ಶಿಕ್ಷಕರ ಕಾಳಜಿ ಹಾಗೂ ಬೋಧನಾ ಶೈಲಿಯಿಂದಾಗಿ ಅಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿಯೇ ವಿಜ್ಞಾನ ವಿಷಯ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಇಂತಹ ವಾತಾವರಣ ಸೃಷ್ಟಿಸಬೇಕೆಂಬುದು ನಮ್ಮಗಳ ಆಶಯವಾಗಿದೆ. ಆ ಕಾರಣಕ್ಕಾಗಿಯೇ ಅಧ್ಯಯನ ಪ್ರವಾಸ ಕೈಗೊಂಡು ವಾಸ್ತವಾಂಶಗಳ ಖುದ್ದು ಅಧ್ಯಯನ ಮಾಡಲಾಯಿತೆಂದರು.
ಕರ್ನಾಟಕದಲ್ಲಿ ಈಗಾಗಲೇ ಇಂಜಿನಿಯರಿಂಗ್ ಶಿಕ್ಷಣಕ್ಕೆ ಕನ್ನಡದ ಪಠ್ಯ ಒದಗಿಸಲಾಗಿದೆ. ಪಿಯು ವಿಜ್ಞಾನ ವಿಷಯಕ್ಕೂ ಕನ್ನಡದ ಪಠ್ಯ ಪೂರೈಕೆ ಮಾಡಲಾಗಿದೆ. ಅಭ್ಯಾಸ ಮಾಡಲು ಸೂಕ್ತ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ಬಾಕಿ ಇದೆ. ಬಿಎಸ್ಸಿ ಪಠ್ಯವನ್ನು ಕನ್ನಡದಲ್ಲಿ ಒದಗಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ. ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಅಭ್ಯಾಸ ಮಾಡಿದವರಿಗೆ ವೃತ್ತಿ ಶಿಕ್ಷಣದಲ್ಲಿ ಅವಕಾಶ ಸಿಗದಿದ್ದರೆ ಅವರುಗಳು ಬಿಎಸ್ಸಿ ಮಾಡಲು ಅನುಕೂಲವಾಗುತ್ತದೆ ಎಂದರು.
ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಹದಿನೈದು ದಿನಗಳ ಒಳಗಾಗಿ ಅಧ್ಯಯನ ವರದಿಯನ್ನು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಸಲ್ಲಿಸ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಲಾಗುವುದು.
ಮುಂದಿನ ಶೈಕ್ಷಣಿಕ ವರ್ಷ ಆರಂಭದ ಒಳಗಾಗಿ ಜಿಲ್ಲೆಯಲ್ಲಿ ಕನಿಷ್ಟ ಹತ್ತು ಕಡೆಯಾದರೂ ಕನ್ನಡದಲ್ಲಿ ಬೋಧನೆ ಮಾಡುವ ಪಿಯು ವಿಜ್ಞಾನದ ಕಾಲೇಜುಗಳ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಜನಪ್ರತಿನಿಗಳು, ಸಂಘ ಸಂಸ್ಥೆಗಳು,ವಿವಿಧ ಸಂಘಟನೆಗಳ ನೆರವಿನಿಂದ ಆಂದೋಲನದ ಸ್ವರೂಪ ನೀಡಲಾಗುವುದೆಂದರು. ಪತ್ರಕರ್ತ ಶ.ಮಂಜುನಾಥ್ ಉಪಸ್ಥಿತರಿದ್ದರು.