ಬೆಂಗಳೂರು: ಸರ್ಕಾರಿ ಕೆಲಸಕ್ಕೆ ಅಂತ ಅದೆಷ್ಟೋ ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಪರೀಕ್ಷೆಗಳು ಕಾಲ್ ಆಗುವುದೇ ಅಪರೂಪ. ಅರ್ಜಿ ಕರೆದ ಪರೀಕ್ಷೆಗಳಲ್ಲೂ ಮೋಸವಾದರೆ ಅಭ್ಯರ್ಥಿಗಳ ಸ್ಥಿತಿ ಏನಾಗಬೇಡ. ಅಂಥದ್ದೇ ಸ್ಥಿತಿ ನಿರ್ಮಾಣವಾಗಿದ್ದಿದ್ದು, ಪಿಎಸ್ಐ ಪರೀಕ್ಷೆಯಲ್ಲಿ. ಅಕ್ರಮ ನಡೆದು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಅಭ್ಯರ್ಥಿಗಳಿಗೆ ಇಂದು ಮರುಪರೀಕ್ಷೆ ನಡೆಸಲಾಗಿದೆ.
ಈ ಬಾರಿಯೂ ಅಕ್ರಮ ನಡೆಯುವ ಸಾಧ್ಯತೆಗಳಿದ್ದಿದ್ದರಿಂದ ಸಾಕಷ್ಟು ಮುನ್ನೆಚ್ಚರಕೆಗಳನ್ನು ವಹಿಸಲಾಗಿತ್ತು. ಅಂತು ಇಂತೂ ಸುಲಲಿತವಾಗಿ ಅಭ್ಯರ್ಥಿಗಳು ಇಂದು ಪರೀಕ್ಷೆ ಬರೆದಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಗೊಂದಲವಿಲ್ಲದೆ ಪರೀಕ್ಷೆಯನ್ನು ಶಾಂತಿಯುತವಾಗಿ ಬರೆಸಲಾಗಿದೆ.
ಬೆಂಗಳೂರಿನ ವಿವಿಧೆಡೆ 117 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ ಕೇಂದ್ರಗಳಲ್ಲೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎರಡು ಹಂತದಲ್ಲಿ ಅಂದರೆ ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಯನ್ನು ನಡೆಸಲಾಗಿದೆ. ಒಟ್ಟು 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಕ್ರಮ ನಡೆಯಬಾರದೆಂಬ ಕಾರಣಕ್ಕೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ನಾಲ್ಕು ಸಶಸ್ತ್ರ ಪೇದೆಗಳನ್ನು ನೇಮಿಸಲಾಗಿತ್ತು. ಇಬ್ಬರು ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು.
545 ಪಿಎಸ್ಐ ಹುದ್ದೆಗೆ ಪರೀಕ್ಷೆ ನಡೆದಿದೆ. ಪರೀಕ್ಷೆ ಹಾಜರಾಗುವ ಪ್ರತಿಯೊಬ್ಬರನ್ನು ಸರಿಯಾಗಿ ತಪಾಸಣೆ ಮಾಡಲಾಗಿದೆ. ಬಹಳಷ್ಟು ಸಮಯದಿಂದ ಅಭ್ಯಾಸ ಮಾಡುತ್ತಿದ್ದ ಅಭ್ಯರ್ಥಿಗಳು ಇಂದು ನೆಮ್ಮದಿಯಿಂದ ಪರೀಕ್ಷೆ ಬರೆದಿದ್ದಾರೆ. ಮುಂದಿನ ಭವಿಷ್ಯಕ್ಕಾಗಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಪೊಲೀಸ್ ಬಂದೋಬಸ್ತ್ ನಲ್ಲಿ ಇಂದು ಪರೀಕ್ಷೆಯನ್ನು ಬರೆಸಲಾಗಿದೆ. ಕಳೆದ ಕೆಲವು ದಿನಗಳಿಂದಾನೂ ರಾಜ್ಯ ಸರ್ಕಾರ, ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಭದ್ರತೆಯ ದೃಷ್ಟಿಯಲ್ಲಿ ಗಮನಹರಿಸಿತ್ತು. ಯಾಕಂದ್ರೆ ಎರಡನೇ ಬಾರಿಯೂ ಅಭ್ಯರ್ಥಿಗಳು ತಮ್ಮ ಭವಿಷ್ಯದ ಪರೀಕ್ಷೆ ಮಾಡಿಕೊಳ್ಳುವಲ್ಲು ತೊಂದರೆಯಾಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹೈಅಲರ್ಟ್ ಆಗಿತ್ತು.