ಊಟದ ಜೊತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

suddionenews
3 Min Read

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಆ.01): ಹಾಸ್ಟೆಲ್‍ಗಳಲ್ಲಿರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಡುಗೆ ತಯಾರಿಕೆ, ಕುಡಿಯುವ ನೀರು, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೇಲ್ವಿಚಾರಕರು ಹಾಗೂ ಅಡುಗೆ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳ ಮೇಲ್ವಿಚಾರಕರು, ಅಡುಗೆ ತಯಾರಕರು, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರುಗಳಿಗೆ ಸೋಮವಾರ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹಾಸ್ಟೆಲ್‍ಗಳಲ್ಲಿ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಪೋಷಕರುಗಳು ನಮ್ಮನ್ನು ಪ್ರಶ್ನಿಸುತ್ತಾರೆ. ಜಿಲ್ಲೆಯಲ್ಲಿರುವ ಪ್ರತಿ ಹಾಸ್ಟೆಲ್‍ಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿ ಅವರ ಜೊತೆಯಲ್ಲಿಯೇ ನಾನು ಕೂಡ ಊಟ ಮಾಡಿ ಬರುತ್ತೇನೆ. ಕೆಲವು ಕಡೆ ಶುಚಿತ್ವವಿಲ್ಲ. ಆಹಾರದಲ್ಲಿ ಹುಳು ಇರುತ್ತದೆ ಎನ್ನುವ ದೂರುಗಳು ಸಾಕಷ್ಟು ಕೇಳಿ ಬರುತ್ತಿದೆ. ಯಾರು ನೋಡುವುದಿಲ್ಲವೆಂದು ಹಗುರವಾಗಿ ತೆಗೆದುಕೊಳ್ಳಬೇಡಿ. ಎಲ್ಲರ ಕಣ್ಣು ಹಾಸ್ಟೆಲ್‍ಗಳ ಕಡೆ ಇರುತ್ತದೆ. ಎಲ್ಲಿಯೂ ಲೋಪವಾಗದಂತೆ ಕೆಲಸ ಮಾಡಿ ಎಂದು ಹೇಳಿದರು.

ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿ ಮೂರು ಕಡೆ ಹಾಸ್ಟೆಲ್‍ಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಅಸ್ತವ್ಯಸ್ತವಾಗಿದೆ. ತರಕಾರಿ ಸೊಪ್ಪುಗಳನ್ನು ಅಡುಗೆಗೆ ಬಳಸುವ ಮುನ್ನ ನೀರಿನಿಂದ ತೊಳೆಯಿರಿ. ಏಕೆಂದರೆ ಕ್ರಿಮಿನಾಶಕಗಳನ್ನು ಬಳಸಿರುತ್ತಾರೆ. ಆಹಾರ ಧಾನ್ಯಗಳಲ್ಲಿ ಹುಳು ಕಂಡು ಬಂದರೆ ಅಡುಗೆಗೆ ಬಳಸಬೇಡಿ. ಆಹಾರ ಪ್ಯಾಕೆಟ್‍ಗಳ ಮೇಲೆ ಮ್ಯಾನುಫ್ಯಾಕ್ಚರ್ ಹಾಗೂ ಎಕ್ಸ್‍ಪೈರಿ ಡೇಟನ್ನು ತಪ್ಪದೆ ಗಮನಿಸಿ ಸ್ಟಾಕ್ ನಿರ್ವಹಣೆ ಸರಿಯಾಗಿರಬೇಕು. ಕೆಲವು ಹಾಸ್ಟೆಲ್‍ಗಳಲ್ಲಿ ಹುಳು ಇರುವ ರವೆ ನೋಡಿದ್ದೇನೆ. ವಾಟರ್ ಕಿಟ್ ಬಳಸಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಇದರ ಜವಾಬ್ದಾರಿಯನ್ನು ಪ್ರತಿ ಪಿ.ಡಿ.ಓ.ಗಳಿಗೆ ವಹಿಸಿ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳಾಗುವುದುಂಟು ಕುಡಿಯುವ ನೀರಿನ ಪೈಪ್ ಎಲ್ಲಿಯದರೂ ಹೊಡೆದರೆ ಕಲುಷಿತ ನೀರು ಪೂರೈಕೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕದಿಂದ ಕ್ಯಾನ್‍ಗಳಲ್ಲಿ ನೀರು ತಂದು ಮಕ್ಕಳಿಗೆ ಕೊಡಿ ಎಂದು ತಾಕೀತು ಮಾಡಿದರು.

ಎಲ್ಲೆಡೆ ಸಾಂಕ್ರಾಮಿಕ ರೋಗವಿದೆ. ಸೊಳ್ಳೆ ಹಾವಳಿ ಜಾಸ್ತಿಯಾಗದಂತೆ ನೋಡಿಕೊಳ್ಳಿ ಹಾಸ್ಟೆಲ್‍ನ ಸುತ್ತಮುತ್ತ ನೀರು ನಿಲ್ಲಬಾರದು. ಅಗತ್ಯಕ್ಕೆ ತಕ್ಕಷ್ಟು ಆಹಾರ ಧಾನ್ಯಗಳನ್ನು ಸ್ಟಾಕ್ ಮಾಡಿಕೊಳ್ಳಿ. ಹೆಚ್ಚಿಗೆ ತೆಗೆದುಕೊಂಡು ಬೇರೆ ಕಡೆ ಸಾಗಿಸುವುದು ಕಂಡು ಬಂದಲ್ಲಿ ಕೆಲಸದಿಂದ ವಜಾಗೊಳಿಸಬೇಕಾಗುತ್ತದೆ. ವಾರ್ಡ್‍ನ್, ಪ್ರಿನ್ಸಿಪಾಲ್‍ಗಳು ರಿಜಿಸ್ಟರ್ ನಿರ್ವಹಣೆ ಮಾಡಿ ಹಾಸ್ಟೆಲ್ ಕಟ್ಟಡಗಳ ಮೇಲೆ ಶುಚಿತ್ವ ಇಲ್ಲದಿದ್ದರೆ ಮಳೆ ಬಂದಾಗ ನೀರು ಹರಿಯದೆ ಸೋರುತ್ತದೆ. ಸೂಕ್ಷ್ಮ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಮಕ್ಕಳ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಿಮಗೆ ಸಿಕ್ಕಿದೆ ಎಂದರೆ ಅದು ನಿಜಕ್ಕೂ ಪುಣ್ಯ. ತೋರ್ಪಡಿಕೆಗಾಗಿ ಕೆಲಸ ಮಾಡದೆ ಆತ್ಮ ತೃಪ್ತಿಗಾಗಿ ಸೇವೆ ಮಾಡಿ ಊಟದ ಜೊತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ. ನೀತಿ ಪಾಠ ಹೇಳಿ, ಕ್ರೀಡೆ ಆಡಿಸಿ, ಕರಾಟೆ ಕಲಿಸಿ ಮಕ್ಕಳಲ್ಲಿ ಅನೇಕ ಪ್ರತಿಭೆಗಳಿರುತ್ತವೆ. ಗುರುತಿಸಿ ಹೊರ ತರುವ ಕೆಲಸವಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ ಜಿಲ್ಲೆಯಲ್ಲಿ ಎಲ್ಲಿಯೂ ಅವಘಡಗಳು ಸಂಭವಿಸಬಾರದೆಂದರೆ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ. ಕೆಲವು ಹಾಸ್ಟೆಲ್‍ಗಳಲ್ಲಿ ಕಲುಷಿತ ನೀರು ಪೂರೈಕೆ, ಸ್ಟಾಕ್ ನಿರ್ವಹಣೆ ಸರಿಯಾಗಿಲ್ಲ ಎನ್ನುವ ದೂರುಗಳು ನಮಗೆ ಸಾಕಷ್ಟು ಕೇಳಿ ಬರುತ್ತಿದೆ. ವಾರ್ಡ್‍ನ್‍ಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನಿರ್ಲಕ್ಷೆ ವಹಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

ಕೆಲವು ಹಾಸ್ಟೆಲ್‍ಗಳಲ್ಲಿ ಧೂಮಪಾನ, ಮದ್ಯಪಾನ ಮಾಡುತ್ತಾರೆಂಬ ದೂರು ನಮಗೆ ಬಂದಿದೆ. ಮುಂದೆ ಆ ರೀತಿಯಾದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು. ಮಕ್ಕಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ. ಕುಡಿಯುವ ನೀರು ಶುದ್ದವಾಗಿರಲಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹಾಸ್ಟೆಲ್‍ಗಳಿಗೆ ಹೋಗಿ ಕುಡಿಯುವ ನೀರು ಹಾಗೂ ಅಡುಗೆಗೆ ಬಳಸುವ ನೀರನ್ನು ಪರೀಕ್ಷಿಸಿ. ಶಾಲೆ ಅಂಗನವಾಡಿಗಳಲ್ಲಿ ಮುಂದಿನ ವಾರದಿಂದ ನೀರು ಪರೀಕ್ಷೆ ನಡೆಯಲಿದೆ. ಅದಕ್ಕಾಗಿಯೇ ಕಿಟ್‍ಗಳನ್ನು ನೀಡಿದ್ದೇವೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಸ್ಟೆಲ್‍ಗಳಲ್ಲಿರುವ ಮಕ್ಕಳ ಕಡೆ ನಿಗಾವಹಿಸಬೇಕು. ಮೂರು ತಿಂಗಳಿಗೊಮ್ಮೆ ನೀರಿನ ಸ್ಯಾಂಪಲ್ ಪಡೆದು ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಬೇಕು ಎಂದರು.

ಅಡುಗೆ ತಯಾರಕರು ತಲೆಗೆ ಕ್ಯಾಪ್ ಹಾಕಿ ಕೈಯನ್ನು ತೊಳೆಯಬೇಕು. ಅಡುಗೆ ತಯಾರಿಕೆಗೂ ಮುನ್ನ ಪಾತ್ರೆಗಳನ್ನು ಶುದ್ದವಾಗಿ ತೊಳೆಯಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಸ್ಟೆಲ್‍ಗಳಿಗೆ ಹೋಗಿ ಪರಿಶೀಲಿಸಿ ಲೈಬ್ರರಿಯಲ್ಲಿ ಓದಲು ಮಕ್ಕಳಿಗೆ ಪುಸ್ತಕಗಳನ್ನು ಕೊಡಿ ಎಂದು ಸೂಚಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜೆ.ಸಿ.ವೆಂಕಟೇಶಯ್ಯ ವೇದಿಕೆಯಲ್ಲಿದ್ದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *