ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜುಲೈ. 16 : ತಾಲೂಕಿನ ಸ್ಟೀಲ್ ಕಾರ್ಖಾನೆಯಲ್ಲಿ ಮೈನಿಂಗ್ ಗುತ್ತಿಗೆ ಪಡೆದಿರುವವರು ಸ್ಥಳೀಯ ಟಿಪ್ಪರ್ ಲಾರಿ ಮಾಲೀಕರಿಗೆ ಅವಕಾಶ ನೀಡದೆ ಬೇರೆಯವರಿಗೆ ಅವಕಾಶ ನೀಡಿರುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ ಟಿ ಕುಮಾರಸ್ವಾಮಿ ಖಂಡಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಟಿಪ್ಪರ್ ಮಾಲೀಕರು ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟೀಲ್ ಕಾರ್ಖಾನೆಗಳಲ್ಲಿ ಮೈನಿಂಗ್ ನಡೆಸಲು ಸ್ಥಳೀಯರಿಗೆ ಅವಕಾಶ ನೀಡದೆ ಹೊರಗಿನವರಿಗೆ ಅವಕಾಶ ನೀಡಿರುವುದರಿಂದ ಲಾರಿ ಮಾಲೀಕರಿಗೆ ಅನ್ಯಾಯವಾಗಿದೆ ಇದರಿಂದ ಲಾರಿ ಮಾಲೀಕರಿಗೆ ತೀವ್ರತರದ ತೊಂದರೆ ಉಂಟಾಗಿದ್ದು ಇವರು ಸಾಲದ ಮೇಲೆ ತಂದಿರುವ ವಾಹನಗಳಿಗೆ ಬಡ್ಡಿ ಕಟ್ಟಲಾಗದೆ ಪರಿತಪಿಸುವಂತೆ ಆಗಿದೆ ಅಲ್ಲದೆ ತಮ್ಮ ದಿನನಿತ್ಯದ ಜೀವನ ನಿರ್ವಹಣೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿರುವುದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತ್ವರಿತಗತಿಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ತಾಲೂಕಿನ ಟಿಪ್ಪರ್ ಲಾರಿ ಮಾಲೀಕರಿಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲದಿದ್ದರೆ ಬಿಜೆಪಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ಸೋಮಶೇಖರ್ ಮಂಡಿಮಠ ಬಾಳೆಕಾಯಿ ರಾಮದಾಸ್ ಸೂರನಹಳ್ಳಿ ಶ್ರೀನಿವಾಸ್ ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಾರುತಿ ಶ್ರೀನಿವಾಸ್ ಸೇರಿದಂತೆ ಟಿಪ್ಪರ್ ಲಾರಿ ಮಾಲೀಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
















