ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜುಲೈ11) : ಗ್ರಾಮೀಣ ಪ್ರದೇಶದ ಜನರಿಗೆ ಒಳ್ಳೆಯ ಆರೋಗ್ಯ ದೊರತರೆ ಉತ್ತಮ ರಾಷ್ಟ್ರನಿರ್ಮಾಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಕೊಡುವ ಕೆಲಸದಲ್ಲಿ ನಿರತರಾಗಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಆರೋಗ್ಯ ಭಾಗ್ಯ” ಒಂದಿದ್ದರೆ ಮುಂದೆ ಎಲ್ಲವೂ ಸರಿ ಹೋಗಲಿದೆ. ಹಾಗಾಗಿ ಗ್ರಾಮೀಣ ಜನರ ಆರೋಗ್ಯ ಕಾಳಜಿವಹಿಸಿ ಎಂದು ಸಲಹೆ ನೀಡಿದರು.
ಜನಸಂಖ್ಯೆ ಹೆಚ್ಚಾದಂತೆ ಕೃಷಿಯಲ್ಲಿ ಒತ್ತಡವೂ ಜಾಸ್ತಿಯಾಗುತ್ತದೆ. ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಪಾತ್ರ ಮಹತ್ವವಾದುದು ಎಂದು ತಿಳಿಸಿದರು.
ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳ ಪ್ರಶಂಸೆ ಮಾಡುವುದು ಅಗತ್ಯ. ಇದರಿಂದ ಬದಲಾವಣೆ ತರಲು ಅವಕಾಶವಿದೆ. ಉತ್ತಮವಾದ ಸೇವೆ ಸಲ್ಲಿಸಿದ ಇಲಾಖೆಯ ನೌಕರರಿಗೆ ಸನ್ಮಾನ ಮಾಡಲಾಗಿದೆ. ಇದೇ ರೀತಿಯಾಗಿ ಪ್ರತಿ ವರ್ಷ ಉತ್ತಮವಾಗಿ ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ರಂಗನಾಥ್ ಮಾತನಾಡಿ, ಜನಸಂಖ್ಯೆಸ್ಫೋಟದಿಂದಾಗಿ ಬಡತನ, ವಸತಿ, ಆಹಾರ, ಪಾಲನೆ-ಪೋಷಣೆ ಸೇರಿದಂತೆ ಇನ್ನೂ ಹಲವು ದುಷ್ಪಾರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಜನಸಂಖ್ಯೆಸ್ಪೋಟ ಆಗದೇ ಇರುವ ರೀತಿಯಲ್ಲಿ ಕ್ರಮವಹಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಪರಿಣಾಮಕಗಾರಿ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಉತ್ತಮ ಆರೋಗ್ಯ ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನ: ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರು, ಶುಶ್ರೂಷಕಿಯರು ಹಾಗೂ ಗ್ರೂಪ್ ಡಿ ನೌಕರರಿಗೆ ಸನ್ಮಾನ ಮಾಡಲಾಯಿತು.
ಹೊಳಲ್ಕೆರೆ ತಾಲ್ಲೂಕಿನ ಡಾ. ಶ್ರೀಧರ್, ಶಾರದದೇವಿ, ಗೌರಮ್ಮ, ಡಾ. ಹರೀಶ್ ಬಾಬು, ವೀಣಾ, ಕೃಷ್ಣಪ್ಪ. ಹೊಸದುರ್ಗ ತಾಲ್ಲೂಕಿನ ರಾಘವೇಂದ್ರ ಪ್ರಸಾದ್, ಡಾ. ಸಂಜಯ್, ವಿಜಯಮ್ಮ, ರಾಮಚಂದ್ರ. ಹಿರಿಯೂರು ತಾಲ್ಲೂಕಿನ ಕವಿತಾ, ತುಳುಸಮ್ಮ, ಪಾಂಡುರಂಗಪ್ಪ. ಚಳ್ಳಕೆರೆ ತಾಲ್ಲೂಕಿನ ಡಾ. ವಿಕಾಸ್, ಶರೀಪ್ ಉಲ್ಲಾ, ನಾಗೇಂದ್ರ. ಮೊಳಕಾಲ್ಮೂರು ತಾಲ್ಲೂಕಿನ ಡಾ. ಅನಿತಾ, ಮಂಜುಳ ಸೇರಿದಂತೆ ಒಟ್ಟು ನೌಕರರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಯೋಜನಾ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿಮಠ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.