ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 04 : ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸುತ್ತ ಮುತ್ತಲಿನ ಸೃಜನಶೀಲ ಯುವ ಬರಹಗಾರರಿಗೆ ಆರ್ಥಿಕ ನೆರವು ನೀಡಿ ಅವರನ್ನು ಸಾಂಸ್ಕೃತಿಕವಾಗಿ ಬೆಳೆಸುವ ನೈತಿಕ ಜವಾಬ್ದಾರಿ ನಾಡಿನ ಚಿಂತಕರ ಮೇಲಿದೆ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯಪಟ್ಟರು.

ನಗರದ ಹೆಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೇಖಕಿ ಎಸ್.ಪಾರಿಜಾತರವರ ಸನೂತನ ವಿಮರ್ಶಾಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನೆರವಿನಹಸ್ತ ನೀಡುವುದರಿಂದ ಬರಹಗಾರರಲ್ಲಿ ಮಾನಸಿಕ ಶಕ್ತಿ ಹೆಚ್ಚುವುದಲ್ಲದೆ ಹಲವು ಉತ್ತಮ ಸಾಹಿತ್ಯ ಕೃತಿಗಳ ರಚಿಸಲು ಸಾಧ್ಯವಾಗುತ್ತದೆ.
ಆಕರ್ಷಕ ಮೊಬೈಲ್ ಹೆಚ್ಚು ಬಳಕೆ ಮಾಡುವುದರಿಂದ ಅದು ಮನಸ್ಸು ತೀರಾ ದುರ್ಬಲಗೊಳಿಸುತ್ತದೆ. ಹೀಗಾಗಿ ಕನ್ನಡದ ಉತ್ಕೃಷ್ಟ ಕೃತಿಗಳನ್ನು ಓದುವ ಸದಾಭಿರುಚಿ ಬೆಳೆಸಿಕೊಂಡು ನಾಡಿನ ಶ್ರೇಷ್ಠ ಚಿಂತಕರಾಗಿ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬಂಡಾಯ ಸಾಹಿತಿ ಪ್ರೊ.ಸಿ.ಶಿವಲಿಂಗಪ್ಪ ಮಾತನಾಡಿ, ಸೀತೆಯ ಅಪಮಾನ ಖಂಡಿಸುವ ಗುಣ ಜಾನಪದ ರಾಮಾಯಣದಲ್ಲಿ ಇದೆ. ಮತ್ತು ಸಂಸ್ಕೃತಿಯ ಸೂಕ್ಷö್ಮ ಚಿಂತನೆಯಿಂದ ದೇಶದ ಧರ್ಮಾಂಧತೆ ದೂರ ಮಾಡಿಕೊಳ್ಳುವ ಅಂಶಗಳು ಸನೂತನ ಕೃತಿಯಲ್ಲಿ ಕಂಡು ಬರುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಮುಳಗಿ ಛಿದ್ರೀಕರಣದ ಚಂಚಲತೆಯಲ್ಲಿ ತೇಲುವ ಬದಲಿಗೆ ವಿದ್ಯಾರ್ಥಿಗಳು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಖ್ಯಾತ ಕಥೆಗಾರ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಘಾಸಿಗೊಂಡ ಬದುಕಿಗೆ ಬಲ ತಂದು ಕೊಡುವುದು ಸಾಹಿತ್ಯ.
ಪ್ರಕೃತಿಯಲ್ಲಿನ ಗಿಡ, ಮರ, ಪಕ್ಷಿಗಳ ಚಲನೆಯನ್ನು ಆಲಿಸುವ ಮನಸ್ಥಿತಿ ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಬಿ.ಎಸ್. ಮಂಜುನಾಥ, ಲೇಖಕಿ ಎಸ್.ಪಾರಿಜಾತ, ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ವಿ.ರಾಜಣ್ಣ ಮಾತನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಶಿವನಂದಯ್ಯ, ಇತಿಹಾಸ ಪ್ರಾಧ್ಯಾಪಕ ಪ್ರೊ.ಕೆ.ಜೆ.ಆರ್.ರಾಜಕುಮಾರ್, ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಚಿತ್ತಯ್ಯ, ಪ್ರೊ.ಎ.ಎಸ್.ಸತೀಶ್, ಪ್ರೊ. ಎಂ.ಮುರಳಿ, ಸಮಾಜಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕೆ.ದೇವಪ್ಪ, ಗ್ರಂಥಪಾಲಕ ಎಸ್.ಪಾಪಣ್ಣ ಇದ್ದರು.


