ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.16): ವಿಜಯನಗರ ಬಡಾವಣೆ ಕೊಳಚೆ ಪ್ರದೇಶದಲ್ಲಿ ಸುಮಾರು ನಲವತ್ತು ವರ್ಷಗಳಿಂದಲೂ ವಾಸಿಸುತ್ತಿರುವವರನ್ನು ಏಕಾಏಕಿ ತೆರೆವುಗೊಳಿಸಲು ನಗರಸಭೆ ಕೈಗೊಂಡಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ದ ಧಿಕ್ಕಾರಗಳನ್ನು ಕೂಗಿ ಯಾವುದೇ ಕಾರಣಕ್ಕೂ ಕೊಳಗೇರಿಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ನಗರಸಭೆ ವಾರ್ಡ್ ನಂ-19 ರ ವ್ಯಾಪ್ತಿಯಲ್ಲಿ ಬರುವ ವಿಜಯನಗರ ಬಡಾವಣೆಯನ್ನು ಕೊಳಗೇರಿ ಪ್ರದೇಶವೆಂದು 2012 ರಲ್ಲಿಯೇ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ. 168 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರೆ ಜಾಸ್ತಿಯಿದ್ದಾರೆ. ಎಲ್ಲರೂ ನಿತ್ಯವೂ ಕೂಲಿ ಮಾಡಿಕೊಂಡು ಜೀವಿಸುವವರಾಗಿರುವುದರಿಂದ ಯಾವುದೇ ಕಾರಣಕ್ಕೂ ಇವರುಗಳನ್ನು ನಗರಸಭೆಯವರು ತೆರವುಗೊಳಿಸಬಾರದು. ನಾಗರೀಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದಲೇ ಕೊಳಗೇರಿ ಎಂದು ಘೋಷಿಸಿದ್ದು, ಇಲ್ಲಿಯವರೆಗೂ ವಿಜಯನಗರ ಬಡಾವಣೆ ನಿವಾಸಿಗಳು ಮೂಲಭೂತ ಸೌಲಭ್ಯಗಳಿಲ್ಲದೆ ವಾಸಿಸುತ್ತಿದ್ದಾರೆಂದರು.
ನಗರಸಭೆಯವರು ಪದೇ ಪದೇ ವಿಜಯನಗರ ಬಡಾವಣೆಯ ಕೊಳಗೇರಿಗಳನ್ನು ತೆರವುಗೊಳಿಸುವಂತೆ ಬಲವಂತ ಮಾಡುತ್ತಿರುವುದರಿಂದ ಕೊಳಚೆ ನಿವಾಸಿಗಳು ಮಾನಸಿಕವಾಗಿ ನೊಂದಿದ್ದಾರೆ. ಹಾಗಾಗಿ ನಗರಸಭೆ ಕೈಗೊಂಡಿರುವ ತೀರ್ಮಾನವನ್ನು ರದ್ದುಪಡಿಸಿ ಅಲ್ಲಿನ ಕೊಳಗೇರಿಗಳಿಗೆ ಮೂಲಸೌಲಭ್ಯಗಳನ್ನು ಒದಗಿಸುವಂತೆ ಬಿ.ಕೆ.ರಹಮತ್‍ವುಲ್ಲಾ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮಾತನಾಡಿ ವಿಜಯನಗರ ಬಡಾವಣೆಯನ್ನು ಕೊಳಗೇರಿ ಎಂದು ಘೋಷಿಸಿದ ಮೇಲೆ ನಾಗರೀಕ ಸೌಲಭ್ಯಗಳಾದ ನಿವೇಶನ, ಮನೆ, ಹಕ್ಕುಪತ್ರ, ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ ಇವುಗಳನ್ನೆಲ್ಲಾ ಕಲ್ಪಿಸುವುದು ನಗರಸಭೆ, ಜಿಲ್ಲಾಡಳಿತ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಇದಕ್ಕೆ ಬದಲಾಗಿ ಯಾರೋ ಮೂರನೆಯವರು ಇಲ್ಲಿ ಓಡಾಡಲು ತೊಂದರೆಯಾಗುತ್ತದೆಂಬ ಒಂದೇ ಕಾರಣಕ್ಕೆ ಇಲ್ಲಿನ ಕೊಳಗೇರಿಗಳನ್ನು ತೆರುವುಗೊಳಿಸಲು ನಗರಸಭೆ ಮುಂದಾಗಿರುವುದು ಜಿಲ್ಲಾಡಳಿತದ ತೀರ್ಮಾನಕ್ಕೆ ವಿರುದ್ದವಾಗಿದೆ. ಒಂದು ವೇಳೆ ಕೊಳಚೆ ಪ್ರದೇಶವನ್ನು ತೆರವುಗೊಳಿಸಿದರೆ ಬಡವರು ಬೀದಿಪಾಲಾಗಬೇಕಾಗುತ್ತದೆ ಎಂದು ಸಮಸ್ಯೆಗಳನ್ನು ತೋಡಿಕೊಂಡರು.
ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಉಪಾಧ್ಯಕ್ಷ ಇಮಾಂಸಾಬ್, ಕಾರ್ಯದರ್ಶಿ ಎನ್.ರಂಗಸ್ವಾಮಿ, ರಜೀಯ, ಮಾರಕ್ಕ, ಫಾಮಿದ, ಕಮಲಮ್ಮ, ರಾಜಣ್ಣ, ನಸ್ರುಲ್ಲಾ ಸೇರಿದಂತೆ ವಿಜಯನಗರ ಕೊಳಗೇರಿ ಪ್ರದೇಶದ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.