ಹೊಳಲ್ಕೆರೆ (ಜು.11) : ರಾಷ್ಟ್ರ ರಾಜಕಾರದಲ್ಲಿ ಸರಳತೆ, ನಿರಂತರ ಹೋರಾಟದ ಮೂಲಕ ಜನಮೆಚ್ಚುಗೆ ಗಳಿಸಿರುವ ಭಾವಿ ಪ್ರಧಾನಿ ರಾಹುಲ್ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಜು.12ರಂದು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದನ್ನೇ ದೇಶದ್ರೋಹ, ಜಾತಿಯೊಂದಕ್ಕೆ ಮಾಡಿದ ಅಪಮಾನ ಎಂಬ ರೀತಿ ಬಿಂಬಿಸುವ ಷಡ್ಯಂತರ ನಡೆಯುತ್ತಿದೆ.
ಈ ಮಧ್ಯೆ ನರೇಂದ್ರ ಮೋದಿ ಮತ್ತು ಅವರ ಟೀಂ ನಡೆಸುತ್ತಿರುವ ಭ್ರಷ್ಟಚಾರ ವಿರುದ್ಧ ಪದೇ ಪದೆ ಧ್ವನಿಯೆತ್ತಿದ್ದನ್ನೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರಾಹುಲ್ ಗಾಂಧಿ ಅವರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ನಡೆದಿದೆ.
ಪ್ರಸ್ತುತ ರಾಜ್ಯವೊಂದರ ಹೈಕೋರ್ಟ್ ಎರಡು ವರ್ಷ ಶಿಕ್ಷೆ ವಿಧಿಸಿದ್ದು, ಇಂತಹ ಸಂಕಷ್ಟ ಸಂದರ್ಭದಲ್ಲಿ ನೀವು ಒಬ್ಬಂಟಿ ಅಲ್ಲ, ನಿಮ್ಮೊಂದಿಗೆ ಇಡೀ ಭಾರತದ ಜನ ಇದ್ದಾರೆ ಎಂಬ ನೈತಿಕ ಬೆಂಬಲ ನೀಡಲು ನಾಡಿನಾದ್ಯಂತ ಜು.12ರಂದು ಬುಧವಾರ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲ್ಲೂಕು ಕಚೇರಿ ಮುಂಭಾಗ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಕ್ಷದ ಹಾಲಿ-ಮಾಜಿ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಪಾಲ್ಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಧರಣಿಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ಸೂಚಿಸಬೇಕು. ನಿಮ್ಮ ಎಲ್ಲ ಜನಪರ ಹೋರಾಟಗಳೊಂದಿಗೆ ನಾವು ಸದಾ ಇರತ್ತೇವೆ ಎಂಬ ಸಂದೇಶ ನೀಡಬೇಕು ಎಂದು ಎಚ್. ಆಂಜನೇಯ ಕೋರಿದ್ದಾರೆ.