ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.09): ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಚಿತ್ರದುರ್ಗ ತಾಲ್ಲೂಕು ಕಾಡುಗೊಲ್ಲ ಸಮಾಜದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಹೆಗಲ ಮೇಲೆ ಕರಿ ಕಂಬಳಿ ಹೊದ್ದು ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಕಾಡುಗೊಲ್ಲರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರೂ ಇನ್ನು ಪರಿಶಿಷ್ಟ ಪಂಗಡಕ್ಕೆ ಏಕೆ ಸೇರಿಸುತ್ತಿಲ್ಲ ಮುಂದೆ ಹೋರಾಟವನ್ನು ಚುರುಕುಗೊಳಿಸಲಾಗುವುದೆಂದು ಸಿಳ್ಳೆ ಕೇಕೆ ಹಾಕಿದರು.
ಅನ್ನಪೂರ್ಣಮ್ಮ ಅಧ್ಯಕ್ಷತೆಯಲ್ಲಿ 2008 ರಲ್ಲಿಯೇ ಕುಲಶಾಸ್ತ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಕಾಡುಗೊಲ್ಲರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಹಕ್ಕೊತ್ತಾಯ ಮಂಡಿಸುತ್ತಲೆ ಬರುತ್ತಿದ್ದೇವೆ. ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಕಾಲ ಕಳೆಯುತ್ತಿದೆ. ಕಾಡುಗೊಲ್ಲರ ಅಭಿವೃದ್ದಿ ನಿಗಮ ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಿ ಮತ್ತೆ ರದ್ದುಪಡಿಸಿ ಕಾಡುಗೊಲ್ಲರಿಗೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ.
ಕೂಡಲೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ದನ-ಕರುಗಳನ್ನು ತಂದು ಉಗ್ರವಾಗಿ ಪ್ರತಿಭಟಿಸಲಾಗುವುದೆಂದು. ಇದಕ್ಕೂ ಸರ್ಕಾರ ಮಣಿಯದಿದ್ದರೆ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಒಂದಾಗಿ ಹೆದ್ದಾರಿ ಬಂದ್ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕಾಡುಗೊಲ್ಲರು ಸರ್ಕಾರಕ್ಕೆ ಎಚ್ಚರಿಸಿದರು.
ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಶಿವಣ್ಣ ಗಂಜಿಗಟ್ಟೆ, ಪ್ರಕಾಶ್‍ಬೆನ್ನೂರು, ರೇವಣಸಿದ್ದಪ್ಪ, ಜಗದೀಶ್ ಜಾಲಿಕಟ್ಟೆ, ವೀರಮಂಜಪ್ಪ, ಜೆ.ಸಿ.ಹಳ್ಳಿ ಜಗದೀಶ್, ಜಿ.ವಿ.ಮಧುಗೌಡ, ಸಿ.ಟಿ.ಕೃಷ್ಣಮೂರ್ತಿ, ಗರಡಿ ತಿಮ್ಮಣ್ಣ ಸೇರಿದಂತೆ ಕಾಡುಗೊಲ್ಲ ಜನಾಂಗದ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

