ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.09 : ಶೈಕ್ಷಣಿಕ ಧನ ಸಹಾಯ ಕಡಿಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿ, ಕಾರ್ಮಿಕ ಸಚಿವರಿಗೆ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನೊಂದಾಯಿತ ಕಟ್ಟಡ ಕಾರ್ಮಿಕರ ನೊಂದಣಿ ಕಾರ್ಡ್ ಪ್ರತಿ ಒಂದು ವರ್ಷಕ್ಕೆ ರಿನೀವಲ್ ಮಾರ್ಪಾಡಾಗಿದ್ದು, ಮೊದಲಿನಂತೆ ಮೂರು ವರ್ಷಕ್ಕೊಮ್ಮೆ ರಿನೀವಲ್ ಮಾಡಬೇಕು.
ನೊಂದಾಯಿತ ಕಟ್ಟಡ ಕಾರ್ಮಿಕರ ಮದುವೆ ಸಹಾಯ ಧನ ಅರವತ್ತು ಸಾವಿರ ರೂ.ಗಳಿಂದ ಒಂದು ಲಕ್ಷಕ್ಕೆ ಹೆಚ್ಚಿಸಬೇಕು.
ನೊಂದಾಯಿತ ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಸಹಾಯ ಧನ ಐವತ್ತು ಸಾವಿರ ರೂ.ಗಳು ಠೇವಣಿಯಿಡದಂತೆ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆಗೊಳಿಸಬೇಕು.
ನಿವೃತ್ತಿ ವಯಸ್ಸನ್ನು ಅರವತ್ತು ವರ್ಷ ಬದಲಿಗೆ 55 ವರ್ಷಕ್ಕೆ ಇಳಿಸಬೇಕು.
ಸರ್ಕಾರ ಶೇ.75 ರಷ್ಟು ಕಡಿಗೊಳಿಸಿರುವುದನ್ನು ಕೈಬಿಟ್ಟು ಈ ಹಿಂದೆ ಇದ್ದ ಶೈಕ್ಷಣಿಕ ಧನ ಸಹಾಯವನ್ನು ಮುಂದುವರೆಸಬೇಕು. 2022-23 ನೇ ಸಾಲಿನಲ್ಲಿ ಕಡಿತಗೊಳಿಸಿರುವ ಬಾಕಿ ಹಣವನ್ನು ಜಮಾ ಮಾಡಬೇಕು. 2023-24 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಅರ್ಜಿ ಸಲ್ಲಿಕೆಗೆ ತಕ್ಷಣ ಅವಕಾಶ ಕಲ್ಪಿಸಬೇಕು.
ಈಗಾಗಲೆ ಖಾಸಗಿಯವರಿಂದ ಆರೋಗ್ಯ ತಪಾಸಣೆ ನಡೆಸುವುದನ್ನು ನಿಲ್ಲಿಸಿ ಬಿಡುಗಡೆಯಾಗಿರುವ ಹಣವನ್ನು ಹಿಂದಕ್ಕೆ ಪಡೆದು ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಬೇಕು.
60 ವರ್ಷ ತುಂಬಿರುವ ಫಲಾನುಭವಿಗಳಿಗೆ ಪಿಂಚಣಿಗೆ ಅರ್ಜಿ ಸಲ್ಲಿಸಲು ವಯೋಮಿತಿ ನಿಗಧಿಪಡಿಸಬಾರದು. 60 ವರ್ಷ ಪೂರ್ಣಗೊಂಡ ನಂತರ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಿದರೂ ಪಿಂಚಣಿ ನೀಡಬೇಕು.
ಐದು ವರ್ಷ ಸೇವೆ ಪೂರೈಸಿರುವ ಫಲಾನುಭವಿಗಳಿಗೆ ಮನೆ/ವಸತಿ ನಿರ್ಮಾಣಕ್ಕೆ ಐದು ಲಕ್ಷ ರೂ.ಗಳ ಧನ ಸಹಾಯ ನೀಡಬೇಕು.
ಬೋಗಸ್ ಕಾರ್ಡ್‍ಗಳನ್ನು ತಡೆಯಲು ಕ್ರಮ ಕೈಗೊಂಡು ಮಂಡಳಿ ಅಭಿವೃದ್ದಿಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಿ ತಾಂತ್ರಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು.
ತಾಂತ್ರಿಕ ಸಮಸ್ಯೆ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲಾಗದ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು. 1996 ರ ಮೂಲ ಕಾಯಿದೆ ಪ್ರಕಾರ ಸೆಸ್‍ನ್ನು ಕನಿಷ್ಠ ಶೇ.2 ಕ್ಕೆ ಹೆಚ್ಚಳ ಮಾಡಬೇಕು. ಈಗಿರುವ ಸೆಸ್ ಸಂಗ್ರಹ ಮಾನದಂಡವನ್ನು ಬಿಗಿಗೊಳಿಸಿ ಖಾಸಗಿ ಸೆಸ್‍ನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಬೇಕು.
ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕ ಸಂಘಟನೆಯಾದ ಎ.ಐ.ಟಿ.ಯು.ಸಿ.ಗೆ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎ.ಐ.ಟಿ.ಯು.ಸಿ. ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಸಹ ಕಾರ್ಯದರ್ಶಿ ಕಾಂ.ದೊಡ್ಡಉಳ್ಳಾರ್ತಿ ಕರಿಯಣ್ಣ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕಾಂ.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಕಾಂ.ಸತ್ಯಕೀರ್ತಿ, ಕಾಂ.ಮುಜಿಮಲ್, ಕಾಂ.ಶಿವಕುಮಾರ್, ಕಾಂ.ಮಲ್ಲಪ್ಪ, ಕಾಂ.ರವಿಕುಮಾರ್, ಕಾಂ.ರಾಮಕೃಷ್ಣ, ಕಾಂ.ಶಶಿಧರ್, ಕಾಂ.ನಸರುಲ್ಲಾ, ಕಾಂ.ಎಂ.ಆರ್.ಬಾಬು ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.