ಒಳ ಮೀಸಲಾತಿಗಾಗಿ ಮಾದಿಗ ಮಹಾಸಭಾದಿಂದ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದರೂ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ತಡ ಮಾಡುತ್ತಿರುವುದನ್ನು ಖಂಡಿಸಿ ಮಾದಿಗ ಮಹಾಸಭಾದಿಂದ ನಗರದಲ್ಲಿ ತಮಟೆ ಚಳುವಳಿ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ಮೂಲಕ ಒನಕೆ ಒಬವ್ವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ತೆಲಂಗಾಣ, ಹರಿಯಾಣ, ಪಂಜಾಬ್, ಆಂಧ್ರದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.1 ಕ್ಕೆ ಒಂದು ವರ್ಷಗಳಾಗಿದ್ದರೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಅದಕ್ಕಾಗಿ ನಾವುಗಳು ಬೀದಿಗಿಳಿದು ಹೋರಾಡಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಳೆಕಾಯಿ ಶ್ರೀನಿವಾಸ್ ಮಾತನಾಡುತ್ತ ಒಳ ಮೀಸಲಾತಿ ಜಾರಿಗಾಗಿ ಕಳೆದ ಮೂವತ್ತೈದು ವರ್ಷಗಳಿಂದಲೂ ಹೋರಾಟ ನಡೆಯುತ್ತಿದ್ದು, ಮಾದಿಗರು ಪಾದರಕ್ಷೆಗಳನ್ನು ಒಲಿಯುತ್ತಾ ನಡು ಬೀದಿಯಲ್ಲಿದ್ದಾರೆ. ಇನ್ನು ಮಲ ಹೊರುವ ಪದ್ದತಿ ನಿಂತಿಲ್ಲ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ನೀಡುವುದಕ್ಕಾಗಿ ಒಳ ಮೀಸಲಾತಿ ಜಾರಿಯಾಗಲೇಬೇಕು. ಅದಕ್ಕಾಗಿ ದಲಿತರು ಮೊದಲು ಒಗ್ಗಟ್ಟಾಗಬೇಕೆಂದು ವಿನಂತಿಸಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ಒಳ ಮೀಸಲಾತಿಗಾಗಿ ಮಾದಿಗರು ಮೂರು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ದಲಿತರನ್ನು ವಂಚಿಸಿಕೊಂಡು ಬರುತ್ತಿವೆ. ದೌರ್ಜನ್ಯ, ದಬ್ಬಾಳಿಕೆ, ಬಹಿಷ್ಕಾರ ಇನ್ನು ನಿಂತಿಲ್ಲ. ಕಟ್ಟ ಕಡೆಯ ಜನಾಂಗಕ್ಕೂ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಸಿಗಬೇಕು. ಆದರೆ ಮಾದಿಗರು ಇನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ. ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಎಚ್ಚರಿಸಿದರು.

ದಲಿತ ಮುಖಂಡರುಗಳಾದ ಬಿ.ರಾಜಣ್ಣ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಏಕಾಂತಪ್ಪ, ಕುಂಚಿಗನಹಾಳ್ ಮಹಲಿಂಗಪ್ಪ, ಟಿ.ವೆಂಕಟೇಶ್, ದೇವರಾಜ್
ಸುನಿಲ್‍ಯಾದವ್, ಕೆ.ರಾಜು, ರಾಮಚಂದ್ರಪ್ಪ ದೊಡ್ಡಘಟ್ಟ, ವಿಶ್ವನಾರಾಯಣಮೂರ್ತಿ, ಕೆಂಚಪ್ಪ, ಚಂದ್ರಶೇಖರ್, ಸುನಿತ, ಲಕ್ಕಮ್ಮ, ಗೌರಮ್ಮ, ಯಶೋಧಮ್ಮ, ಮಂಜಮ್ಮ
ಚಂದ್ರಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *