ಚಿತ್ರದುರ್ಗ : ಪಿ.ಎಸ್.ಐ.ನೇಮಕಾತಿಯಲ್ಲಿ ಅಕ್ರಮವಾಗಿರುವುದರ ವಿರುದ್ದ ಧ್ವನಿ ಎತ್ತಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆರವರಿಗೆ ಕೋಮುವಾದಿ ಬಿಜೆಪಿ ಸರ್ಕಾರ ನೋಟಿಸ್ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಾದಿಗ ಯುವ ಸೇನೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿರುವುದು ದಿನದಿಂದ ದಿನೆ ಜಾಸ್ತಿಯಾಗುತ್ತಿದೆ. ಅಕ್ರಮವನ್ನು ಯಾರು ಪ್ರಶ್ನಿಸುತ್ತಾರೋ ಅಂತಹವರಿಗೆ ನೋಟಿಸ್ ನೀಡುವ ಪರಿಪಾಠ ಬೆಳೆಸಿಕೊಂಡಿರುವ ಬಿಜೆಪಿ.ಸರ್ಕಾರ ದಲಿತ ನಾಯಕ ಪ್ರಿಯಾಂಕ ಖರ್ಗೆಗೆ ನೋಟಿಸ್ ನೀಡಿ ಸ್ವಾತಂತ್ರ್ಯವನ್ನು ಧಮನ ಮಾಡಲು ಹೊರಟಿದೆ.
ಪಿ.ಎಸ್.ಐ.ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಚಿವರು, ಮಾಜಿ ಮಂತ್ರಿಗಳ ಮಕ್ಕಳು, ಬಿಜೆಪಿ. ಘಟಕದ ವಿವಿಧ ಪದಾಧಿಕಾರಿಗಳ ಹೆಸರುಗಳು ಕೇಳಿ ಬರುತ್ತಿದ್ದು, ಅವರ್ಯಾರುಗಳನ್ನು ಬಂಧಿಸಿ ವಿಚಾರಣೆ ನಡೆಸುವ ಗೋಜಿಗೆ ಹೋಗದ ಬಿಜೆಪಿ.ತನ್ನ ಹುಳುಕು ಮುಚ್ಚಿಕೊಳ್ಳಲು ಅಕ್ರಮದ ವಿರುದ್ದ ಯಾರು ಮಾತನಾಡುತ್ತಾರೋ ಅಂತಹವರಿಗೆ ನೋಟಿಸ್ ನೀಡುವುದು ಇನ್ನು ಮುಂದೆ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಮಾದಿಗ ಯುವ ಸೇನೆಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಾದಿಗ ಯುವ ಸೇನೆ ಜಿಲ್ಲಾಧ್ಯಕ್ಷ ಓ.ರಾಜಪ್ಪ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ದೇವರಾಜ್, ಬಿ.ಓ.ಗಂಗಾಧರಯ್ಯ, ಜೆ.ಪ್ರಸನ್ನ, ರಾಜಪ್ಪ, ಮಲ್ಲಯ್ಯ, ಕೆ.ರುದ್ರಮುನಿ, ನಾಗೇಂದ್ರಬಾಬು, ಎಸ್.ಧರ್ಮಪತಿ, ಆರ್.ಮಲ್ಲಿಕಾರ್ಜುನ್, ಓ.ಸೋಮಣ್ಣ ಸೇರಿದಂತೆ ನೂರಾರು ದಲಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.