ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 22 : ಬರ ಪರಿಹಾರ ಮತ್ತು ಬೆಳೆ ವಿಮೆ ತಾರತಮ್ಯವನ್ನು ಸರಿಪಡಿಸಿ ರೈತರ ಬ್ಯಾಂಕ್ ಖಾತೆಗೆ ಹಣ ಜಮ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದವರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾನಿರತ ರೈತರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳ ಸಂಚಾರವನ್ನು ತಡೆದು ಸರ್ಕಾರದ ಗಮನ ಸೆಳೆದರು.
ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ ಬರ ಪರಿಹಾರ ಸಹಾಯವಾಣಿ ಕೇಂದ್ರದಲ್ಲಿ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ದಾಖಲೆಗಳನ್ನು ಕೊಡಿ ಪರಿಶೀಲಿಸಿ ಹೇಳುತ್ತೇವೆಂಬ ಉತ್ತರ ಕೊಡುತ್ತಿದ್ದಾರೆ. ಬೋರ್‍ವೆಲ್ ಕೊರೆಸಿರುವ ರೈತರ ಜಮೀನುಗಳನ್ನು ನೀರಾವರಿ ಎಂದು ನಮೂದಿಸಿರುವುದರಿಂದ ಅನೇಕರಿಗೆ ಬೆಳೆ ವಿಮೆ, ಬರ ಪರಿಹಾರದ ಹಣ ಕೈಸೇರುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ರೈತರು ದೂರಿದರು.
ಗೋಮಾಳ, ಅರಣ್ಯ ಭೂಮಿ, ಬಗರ್‍ಹುಕುಂ, ಹುಲ್ಲುಬನ್ನಿ ಖರಾಬ್, ಸೇಂದಿವನ ಸಾಗುವಳಿ ಮಾಡಿರುವ ರೈತರೂ ಬರದಿಂದ ತತ್ತರಿಸಿದ್ದಾರೆ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ತೊಗರಿ, ರಾಗಿ, ಸಜ್ಜೆ, ಹತ್ತಿ, ಸೂರ್ಯಕಾಂತಿ, ತೋಟಗಾರಿಕೆ ಬೆಳೆಗಳು, ಹೂವು ಬೆಳೆಯುವಂತ ರೈತರಿಗೆ ಪ್ರತಿ ಹೆಕ್ಟೇರ್‍ಗೆ ಮೂವತ್ತೈದು ಸಾವಿರ ರೂ.ಗಳನ್ನು ಶೀಘ್ರವಾಗಿ ನೀಡುವಂತೆ ರೈತರು ಒತ್ತಾಯಿಸಿದರು.
ಪ್ರತಿಭಟನಾನಿರತ ರೈತರ ಬಳಿ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಲ್ಲೆಲ್ಲಿ ಸಮಸ್ಯೆ, ವ್ಯತ್ಯಾಸವಾಗಿದೆ ಎನ್ನುವುದನ್ನು ಸರಿಪಡಿಸಿ ಕೂಡಲೆ ರೈತರ ಖಾತೆಗಳಿಗೆ ಬೆಳೆವಿಮೆ, ಬರ ಪರಿಹಾರ ಹಣವನ್ನು ಜಮ ಮಾಡಲಾಗುವುದು ಅಲ್ಲಿಯತನಕ ಸಮಾಧಾನದಿಂದ ಇರಿ. ಕೆಲವು ಕಡೆ ಐ.ಎಫ್.ಎಸ್.ಸಿ. ಕೋಡ್‍ಗಳಲ್ಲಿ ವ್ಯತಾಸವಿದೆ. ಮತ್ತೆ ಕೆಲವು ರೈತರ ಜಮೀನುಗಳು ನೀರಾವರಿ ಎಂದು ನಮೂದಾಗಿರುವುದರಿಂದ ಹಣ ಜಮ ಮಾಡುವಲ್ಲಿ ವಿಳಂಭವಾಗುತ್ತಿದೆ. ಇಂತಹ ಅನೇಕ ಅಡಚಣೆಗಳಿರುವುದರಿಂದ ಕೃಷಿ ಇಲಾಖೆ ಅಧಿಕಾರಗಳ ಜೊತೆ ಮಾತನಾಡಿದ್ದೇನೆ. ಆದಷ್ಠು ಬೇಗನೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.
ಬೋರ್‍ವೆಲ್ ಕೊರೆಸಿಕೊಂಡಾಕ್ಷಣ ರೈತರ ಜಮೀನುಗಳನ್ನು ನೀರಾವರಿ ಎಂದು ನಿರ್ಧರಿಸುವುದು ತಪ್ಪು. ಸರ್ಫೆಸ್ ವಾಟರ್ ಹರಿಸಿಕೊಂಡು ಯಾರು ಕೃಷಿ ಮಾಡುತ್ತಾರೋ ಅಂತಹ ಜಮೀನುಗಳನ್ನು ನೀರಾವರಿ ಎನ್ನಬಹುದು. ರೈತರ ಸಾಲಕ್ಕೆ ಬರ ಪರಿಹಾರದ ಹಣವನ್ನು ಜಮ ಮಾಡಿಕೊಳ್ಳುವಂತಿಲ್ಲ ಎಂದು ಈಗಾಗಲೆ ಬ್ಯಾಂಕ್‍ನವರಿಗೆ ಆದೇಶ ಮಾಡಿದ್ದೇನೆ. ಇದನ್ನು ಮೀರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಆತಂಕ ಪಡುವುದು ಬೇಕಿಲ್ಲ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಡಾ.ವಾಸುದೇವಮೇಟಿ, ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ, ಕಾರ್ಯಾಧ್ಯಕ್ಷ ಓಂಕಾರಪ್ಪ, ಕೆಂಚಪ್ಪನಾಯಕ, ರಮೇಶ್ ಗುಂಡ್ಲೂರು, ಶ್ರೀಧರರೆಡ್ಡಿ ದೊಗ್ಗಲ್, ಸತ್ಯಪ್ಪ ಮಲ್ಲಾಪುರ, ಕುಮಾರ ಬಿ. ಟಿ.ಮೋಹನ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.