ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ನಮ್ಮ ಸಂಪತ್ತನ್ನೆ ಲೂಟಿ ಹೊಡೆದು ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿರುವ ಜಾನ್ ಮೈನ್ಸ್ ಹಾಗೂ ವೇದಾಂತ ಮೈನ್ಸ್ ವಿರುದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಐವತ್ತೆರಡು ಕುಟುಂಬಗಳು ನೂರಾರು ಲಾರಿಗಳನ್ನು ತಡೆದು ಸಿರಿಗೆರೆಯ ಡಿ.ಮದಕರಿಪುರ ಸಮೀಪ ಚಳಿ ಗಾಳಿ ಮಳೆಯನ್ನು ಲೆಕ್ಕಿಸದೆ ಕೆಸರಿನಲ್ಲಿಯೇ ಕುಳಿತು ಕಳೆದ ನಾಲ್ಕು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿ.ಮದಕರಿಪುರ, ತಣಿಗೆಹಳ್ಳಿ, ಮುತ್ತುಗದೂರು, ಕಾಗಳಗೆರೆ, ಸಾಸಲು ಗ್ರಾಮಗಳ ಎಸ್ಸಿ.ಎಸ್ಟಿ. ಜನಾಂಗದ 52 ಲಾರಿಗಳನ್ನು ಅದಿರು ಸಾಗಾಣಿಕೆಗೆ ಬಳಸಿಕೊಂಡು ಈಗ ಏಕಾಏಕಿ ಹೊರಗಿಟ್ಟಿರುವುದರಿಂದ ಪ್ರತಿ ತಿಂಗಳು ಇ.ಎಂ.ಐ. ಮೂವತ್ತು ಸಾವಿರ ರೂ.ಗಳನ್ನು ಕಟ್ಟಿ ಕುಟುಂಬ ಜೀವನ ಸಾಗಿಸುವುದು ಹೇಗೆ? ಮಕ್ಕಳ ಶಿಕ್ಷಣಕ್ಕೆ ಕಂಠಕವಾಗಿದೆ. ಪ್ರತಿಭಟನಾನಿರತರ ಮೇಲೆ ಮೈನ್ಸ್‍ನವರು ಹಲ್ಲೆಗೆ ಯತ್ನಿಸುತ್ತಿದ್ದಾರೆಂದು ಶೋಷಣೆಗೊಳಗಾಗಿ ಧರಣಿಗೆ ಮುಂದಾಗಿರುವವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮಧ್ಯ ಪ್ರವೇಶಿಸಿ 52 ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮೈನ್ಸ್‍ನವರಿಗೆ ಅದಿರು ತುಂಬಲು ಬಿಡುವುದಿಲ್ಲ. ಸುತ್ತಮುತ್ತಲಿನ ಬೆಳೆಗಳು ಗಣಿ ಧೂಳಿನಿಂದ ಹಾನಿಯಾಗಿದೆ. ಸ್ಥಳೀಯರಿಗೆ ಶೇ.80 ರಷ್ಟು ಉದ್ಯೋಗ ನೀಡಬೇಕೆಂಬ ನಿಯಮವಿದ್ದರೂ ಜಾನ್ ಮೈನ್ಸ್ ಮತ್ತು ವೇದಾಂತ ಮೈನ್ಸ್‍ನವರು ಹೊರಗಿನಿಂದ ಕೆಲಸಕ್ಕೆ ಜನರನ್ನು ಕರೆಸಿಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರೆನ್ನುವ ಕಾರಣಕ್ಕಾಗಿ ನಮ್ಮನ್ನು ಹೊರಗಿಟ್ಟಿದ್ದಾರೆ.
ನ್ಯಾಯ ಸಿಗುವತನಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲವೆಂದು ಧರಣಿನಿರತರು ಪಟ್ಟು ಹಿಡಿದಿದ್ದಾರೆ.
ಅದಿರು ಸಾಗಾಣಿಕೆಯನ್ನೇ ನಂಬಿಕೊಂಡು ಸಾಲ ಪಡೆದು ಲಾರಿಗಳನ್ನು ತಂದಿರುವ ಡಿ.ಮದಕರಿಪುರ, ತಣಿಗೆಹಳ್ಳಿ, ಮುತ್ತುಗದೂರು, ಕಾಗಳಗೆರೆ, ಸಾಸಲು ಗ್ರಾಮದವರಾದ ನಾವುಗಳು ಕುಟುಂಬ ನಿರ್ವಹಿಸಲು ಆಗದೆ ವಿಷ ಕುಡಿಯುವ ಹಂತಕ್ಕೆ ತಲುಪಿದ್ದೇವೆ. ಗಣಿ ಭಾದಿತ ಪ್ರದೇಶಗಳ ಜನತೆಗೆ ಉದ್ಯೋಗ ಕಲ್ಪಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ಮೈನ್ಸ್‍ನವರು ಕ್ಯಾರೆ ಎನ್ನುತ್ತಿಲ್ಲ. ಮೇಲ್ವರ್ಗದ ಕಪಿ ಮುಷ್ಟಿಯಲ್ಲಿರುವ ಜಾನ್ ಮೈನ್ಸ್ ಮತ್ತು ವೇದಾಂತ ಮೈನ್ಸ್‍ನವರು ಮೂರು ಲಕ್ಷದಿಂದ ಹದಿನೆಂಟು ಲಕ್ಷ ಟನ್‍ವರೆಗೆ ಅದಿರು ಸಾಗಿಸುತ್ತಿದ್ದಾರೆಂದು ಪ್ರತಿಭಟನಾನಿರತರು ತಮಗಾಗುತ್ತಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ಜಿಲ್ಲಾ ಬಂಜಾರ ಲಂಬಾಣಿ ಸಮಾಜದ ಅಧ್ಯಕ್ಷ ಎಂ.ಸತೀಶ್‍ಕುಮಾರ್, ರಾಜಣ್ಣ ಹಿರೇಕಂದವಾಡಿ, ತಿಪ್ಪೇಶ್ ಕಡೂರ್, ಸುಂದರಮೂರ್ತಿ ಹೊಳಲ್ಕೆರೆ, ಉಮಾಪತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.