ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್ ಚಿತ್ರದುರ್ಗ : ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಎಸ್.ಸಿ.ದಾಕ್ಷಾಯಿಣಿ ಹಾಗೂ ಲೆಕ್ಕ ಪರಿಶೋಧನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ದಾವಣಗೆರೆ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಜಂಟಿ ನಿರ್ದೇಶಕರ ಕಚೇರಿಗೆ ಉಪ ನಿರ್ದೇಶಕರಾಗಿ ಬಡ್ತಿ ಹೊಂದಿರುವ ಡಾ.ದಿನೇಶ್ ಕೆ.ಇವರುಗಳಿಗೆ ಶನಿವಾರ ಇಲ್ಲಿನ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಹಿರಿಯ ಉಪನಿರ್ದೇಶಕರ ಕಚೇರಿಯಲ್ಲಿ ಬೀಳ್ಕೋಡುಗೆ ನೀಡಲಾಯಿತು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಹಿರಿಯ ಉಪನಿರ್ದೇಶಕ ಸಿ.ಜಿ.ಶ್ರೀನಿವಾಸ್‍ರವರು ಮಾತನಾಡಿ ಎಸ್.ಸಿ.ದಾಕ್ಷಾಯಿಣಿರವರು ಬೆಂಗಳೂರಿನ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಪಾರ ಜ್ಞಾನ ಹೊಂದಿದ್ದಾರೆ. ಶ್ರದ್ದೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ ಅವರಲ್ಲಿದೆ. ಹಿರಿಯ ಮತ್ತು ಕಿರಿಯ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದರು. ನಮ್ಮ ಇಲಾಖೆ ಸಂಪೂರ್ಣ ಲೆಕ್ಕ ಪರಿಶೋಧನಾ ಇಲಾಖೆಯಾಗಿರುವುದರಿಂದ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಒಳ್ಳೆಯ ಕೀರ್ತಿ ತರಬಹುದೆಂದು ಹೇಳಿದರು.
ಲೆಕ್ಕ ಪರಿಶೋಧನಾಧಿಕಾರಿಯಾಗಿ ದಾವಣಗೆರೆ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲಕ್ಕೆ ಉಪನಿರ್ದೇಶಕಾಗಿ ಬಡ್ತಿ ಹೊಂದಿರುವ ಡಾ.ದಿನೇಶ್ ಕೆ.ರವರು ಕೆಲಸದ ಜೊತೆಗೆ ಪಿ.ಹೆಚ್.ಡಿ.ಪದವಿಯನ್ನು ಪಡೆದುಕೊಂಡರು. ಅಪಾರ ಜ್ಞಾನವುಳ್ಳವರಾಗಿದ್ದು, ನಮ್ಮ ಕಚೇರಿಗೆ ಸಂಪೂನ್ಮಲವಾಗಿದ್ದರು ಎಂದು ಗುಣಗಾನ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಮಧು ಡಿ.ಆರ್.ಮಾತನಾಡಿ ಎಸ್.ಸಿ.ದಾಕ್ಷಾಯಿಣಿರವರು ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದರು. ಸದಾ ಹಸನ್ಮುಖಿಯಾಗಿ ಕಿರಿಯ ಸಹೋದ್ಯೋಗಿಗಳಿಗೆ ಸೂಕ್ತ ರೀತಿಯ ಮಾರ್ಗದರ್ಶನ ನೀಡುತ್ತಿದ್ದರು. ಸರ್ಕಾರಿ ಕೆಲಸ ಎಂದ ಮೇಲೆ ನಿವೃತ್ತಿ ಬಡ್ತಿ ಸಾಮಾನ್ಯ. ಹಾಗಾಗಿ ಕೆಲಸದಲ್ಲಿ ನಿಷ್ಟೆ ಇರಬೇಕೆಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಮಾತನಾಡಿ ಲೆಕ್ಕಪತ್ರ ಇಲಾಖೆ ಎಂದರೆ ವಿಶಿಷ್ಟವಾದುದು. ಇಲ್ಲಿ ಸ್ವಲ್ಪ ಮೈಮರೆತರು ತಪ್ಪಾಗುವುದು ಖಂಡಿತ. ಹಾಗಾಗಿ ಕೆಲಸದ ಅವಧಿಯಲ್ಲಿ ಎಚ್ಚರಿಕೆಯಿಂದಿರಬೇಕು. ಪದೋನ್ನತಿ, ನಿವೃತ್ತಿ ಸರ್ಕಾರಿ ಸೇವೆಯಲ್ಲಿ ಒಂದು ಅಂಗ. ಅದಕ್ಕಾಗಿ ಎಸ್.ಸಿ.ದಾಕ್ಷಾಯಿಣಿರವರ ನಿವೃತ್ತಿ ಜೀವನ ಸುಖಕರವಾಗಿರಲಿ. ಅದರಂತೆ ಬಡ್ತಿ ಹೊಂದಿ ದಾವಣಗೆರೆಗೆ ವರ್ಗವಾಗಿರುವ ಡಾ.ದಿನೇಶ್ ಕೆ.ರವರು ಅಲ್ಲಿಯೂ ಒಳ್ಳೆಯ ಕೀರ್ತಿ ಸಂಪಾದಿಸಲಿ ಎಂದು ಹಾರೈಸಿದರು.
ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ದಾವಣಗೆರೆ ಜಂಟಿ ನಿರ್ದೇಶಕ ಷಣ್ಮುಖ ಎಲ್.ಮಾತನಾಡಿ ನಿವೃತ್ತಿ ಬಡ್ತಿ ಎನ್ನುವುದು ಸರ್ಕಾರಿ ನೌಕರರು ಎಲ್ಲರಿಗೂ ಸಿಗುತ್ತದೆ. ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕವಾಗಿರಬೇಕು. ಜನರ ತೆರಿಗೆ ಹಣದಿಂದ ನೌಕರರು ಸಂಬಳ ತೆಗೆಕೊಳ್ಳುತ್ತಾರೆ. ಆತ್ಮತೃಪ್ತಿ ಸಿಗಬೇಕು. ಲೆಕ್ಕಪತ್ರ ಇಲಾಖೆ ಅಂಕಿ ಅಂಶಗಳ ಇಲಾಖೆ. ತಪ್ಪಾಗದಂತೆ ಎಚ್ಚರದಿಂದ ಕೆಲಸ ಮಾಡುವುದರ ಜೊತೆಗೆ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಜಿಲ್ಲಾ ಶಾಖೆ ಅಧ್ಯಕ್ಷ ನಾಗರಾಜ ಕೆ ಹಾಗೂ ಇಲಾಖೆಯ ಕೆಲವು ಸಿಬ್ಬಂದಿಗಳು ಮಾತನಾಡಿದರು.
ನಿರ್ಮಲ ವಿ.ಪ್ರಾರ್ಥಿಸಿದರು, ಲೆಕ್ಕ ಅಧೀಕ್ಷಕ ಟಿ.ರವಿಚಂದ್ರ ಸ್ವಾಗತಿಸಿದರು, ಲೆಕ್ಕ ಪರಿಶೋಧನಾಧಿಕಾರಿ ಹೆಚ್.ಶಿವಕುಮಾರ್ ನಿರೂಪಿಸಿದರು.
ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಎಲ್ಲಾ ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.