ಪಿಎಂ ನರೇಂದ್ರ ಮೋದಿ ಕುರಿತ ಪ್ರಾಮೀಸ್ಡ್ ನೇಷನ್ ಪುಸ್ತಕ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಲೋಕಾರ್ಪಣೆ 

ನವದೆಹಲಿ: ಪ್ರಧಾನಿ ಮೋದಿಯವರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಯಾರಿಗೆ ಇರಲ್ಲ ಹೇಳಿ. ಇದೀಗ ಅವರ ಜೀವನ, ಕಾರ್ಯ ಮತ್ತು ನಾಯಕತ್ವ ಪುಸ್ತಕ ಲೋಕಾರ್ಪಣೆಗೊಂಡಿದೆ. ಅದರಲ್ಲೂ ಅಂಧರು ಮೋದಿಯವರ ಜೀವನದ ಹಾದಿಯನ್ನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಈ ಪುಸ್ತಕವನ್ನು ಸಿದ್ಧತೆ ಮಾಡಲಾಗಿದೆ. ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ್ದು, ‘ಎ ಪ್ರಾಮೀಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ- ದ ಮೇಕರ್ ಆ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಾರ್ಪಣೆಗೊಳಿಸಿದರು.

 

ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಪುಸ್ತಕ ಹೊರತರಲಾಗಿದೆ. ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಆನಂದ ಸಂಕೇಶ್ವರ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯ ಸಂಸ್ಥಾಪಕಿಯರಾದ ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಅಮಿತ್ ಷಾ ಪುಸ್ತಕ ಬಿಡುಗಡೆಗೊಳಿಸಿದರು.

‘ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು. ಇದು ನಿಜಕ್ಕೂ ಸಾಹಸಮಯ ಕೆಲಸ. ವಿಆರ್‌ಎಲ್ ಸಂಸ್ಥೆ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಗೆ ಅಭಿನಂದನೆಗಳು’ ಎಂದು ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ದೇಶದ ನಾಗರಿಕ ಮೌಲ್ಯ ಮತ್ತು ಸಾಂಸ್ಕೃತಿಕ ತತ್ವಗಳನ್ನು ಪುನರುಜ್ಜೀವನಗೊಳಿಸಿ, ಹೊಸ ಭಾರತದ ಸೌಧವನ್ನು ನಿರ್ಮಾಣ ಮಾಡಿದ್ದಾರೆ. ಈ ಹಾದಿಯಲ್ಲಿ ಮೋದಿಯವರು ಭಾರತದ ಅಂತರಂಗದ ಜಗತ್ತನ್ನು ಮತ್ತಷ್ಟು ಜಾಗೃತಗೊಳಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟ ಅಮಿತ್ ಷಾ, ಈ ಪುಸ್ತಕ ಬ್ರೈಲ್ ಲಿಪಿಯಲ್ಲಿದೆ. ಮೋದಿಯವರ ಜೀವನ, ಕಾರ್ಯ, ಮಾಡಿದ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *