ಬೆಂಗಳೂರು, ಮಾ.06: ಅಧಿಕಾರದಲ್ಲಿದ್ದಾಗ ರಾಜ್ಯದ ಎಲ್ಲಾ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದವರು ಇದೀಗ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಡಂಗುರ ಸಾರುತ್ತಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಆರೋಪಿಸಿದರು.
ಸೋಮವಾರ ಬೆಸ್ಕಾಂನ 8 ಜಿಲ್ಲೆಗಳ ವ್ಯಾಪ್ತಿಯಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉಚಿತ ವಿದ್ಯುತ್ ಭರವಸೆ ನೀಡಿ ಎಸ್ಕಾಂಗಳನ್ನು ನಷ್ಟದ ಅಂಚಿಗೆ ತಳ್ಳಿ ಖಾಸಗೀಕರಣ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಅಭಿಪ್ರಾಯಪಟ್ಟರು.
“ನೀವು ಅಧಿಕಾರದಲ್ಲಿದ್ದಾಗ ಎಸ್ಕಾಂಗಳನ್ನು ನಷ್ಟಕ್ಕೆ ದೂಡಿದ್ದೀರಿ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್ಕಾಂಗಳನ್ನು ಸಬಲೀಕರಣಗೊಳಿಸಿದ್ದೇವೆ. ಗುಣಮಟ್ಟದ ವಿದ್ಯುತ್ ಅನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಎಸ್ಕಾಂಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಅವುಗಳನ್ನು ನಷ್ಟದಿಂದ ಹೊರ ತರುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಸಚಿವರು ತಿಳಿಸಿದರು.
“ನಮ್ಮ ಸರ್ಕಾರ ಬಂದ ನಂತರ ಅಮೃತ ಯೋಜನೆ, ಭಾಗ್ಯ ಯೋಜನೆ ಹಾಗೂ ಕುಟೀರ ಯೋಜನೆಗಳನ್ನು ಜಾರಿಗೆ ತಂದು ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ. ಈ ಯೋಜನೆಗಳಿಂದಾಗಿ ಕಾರ್ಮಿಕರು, ಬಡವರು, ಕೃಷಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುತ್ತಿದೆ” ಎಂದು ಸಚಿವರು ತಿಳಿಸಿದರು.
ವಿದ್ಯುತ್ ರಹಿತವಾದ ಮನೆಗಳಿಗೆ ವಿದ್ಯುತ್ ನೀಡಬೇಕು ಎಂಬ ಉದ್ದೇಶದಿಂದ ಬೆಳಕು ಯೋಜನೆ ಜಾರಿಗೆ ತಂದು 3 ಲಕ್ಷ ಮನೆಗಳಿಗೆ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನ ಪತ್ರ (ಓಸಿ) ಕಡ್ಡಾಯವಾಗಿತ್ತು. ನಮ್ಮ ಸರಕಾರದ ಅದನ್ನು ತೆಗೆದು ಹಾಕಿ ವಿದ್ಯುತ್ ಸಂಪರ್ಕ ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಲಾಗಿದೆ. ಇದರಿಂದಾಗಿ 10 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್ , ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಸೇರಿ 16 ಸಾವಿರ ಕೋಟಿ ರೂ. ಸಹಾಯಧನವನ್ನು ನೀಡಲಾಗುತ್ತಿದೆ. ಇದರಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ 12 ಸಾವಿರ ಕೋಟಿ ರೂ. ಹಾಗೂ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿಯಲ್ಲಿ 4 ಸಾವಿರ ಕೋಟಿ ರೂ. ಗಳ ಸಹಾಯಧನ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರವಹಿಸಿಕೊಂಡ ಬಳಿಕ ಹಿಂದಿನ ಸರ್ಕಾರ ಎಸ್ಕಾಂಗಳಿಗೆ ಬಾಕಿ ಇರಿಸಿಕೊಂಡಿದ್ದ ಹಣವನ್ನು ನೀಡುವುದರ ಜೊತೆಗೆ ಇಲಾಖೆಯನ್ನು ಇನ್ನಷ್ಟು ಸದೃಡಗೊಳಿಸಲು ಕ್ರಮವಹಿಸಲಾಗಿದೆ ಎಂದರು.
26 ಲಕ್ಷ ಭಾಗ್ಯ ಜ್ಯೋತಿ, 20 ಲಕ್ಷ ಕುಟೀರ ಜ್ಯೋತಿ ಸಂಪರ್ಕವನ್ನು ಕಲ್ಪಿಸಲಾಗಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಿಪಿಎಲ್ ಗ್ರಾಹಕರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹೀಗಾಗಿ ನಮ್ಮ ಸರಕಾರ ಬಹುತೇಕ ಉಚಿತ ವಿದ್ಯುತ್ ಅನ್ನು ಅರ್ಹ ಗ್ರಾಹಕರಿಗೆ ನೀಡುತ್ತಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯಸಚೇತಕ ಹಾಗು ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಎಂ. ಸತೀಶ್ ವಹಿಸಿದ್ದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೆಶಕ ಮಹಾಂತೇಶ ಬೀಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ , ಬೆಸ್ಕಾಂನ ನಿರ್ದೇಶಕ (ಹಣಕಾಸು)ದರ್ಶನ್ ಜೆ, ನಿರ್ದೇಶಕ (ತಾಂತ್ರಿಕ) ರಮೇಶ್ ಎಚ್. ಕೆ. ಹಾಗು ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.