ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪ ಆಯ್ಕೆ

1 Min Read

 

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ಹೊಳಲ್ಕೆರೆಯಲ್ಲಿ ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪನವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ.

ಜಿಲ್ಲೆಯಲ್ಲಿ ಹಳೆಗನ್ನಡ ಸಾಹಿತಿಯಾಗಿರುವ ಪ್ರೊ.ಪರಮೇಶ್ವರಪ್ಪನವರು ಹಲವಾರು ಕೃತಿಗಳನ್ನು ರಚಿಸಿದ್ದು, ಬುಡಕಟ್ಟು ಸಮುದಾಯಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಮಾ. 9, ಭಾನುವಾರ ಮತ್ತು 10 ರ ಸೋಮವಾರ ಹೊಳಲ್ಕೆರೆಯಲ್ಲಿ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈಗಾಗಲೇ ಸಮ್ಮೇಳನದ ಲಾಂಛನವನ್ನು ಉಸ್ತುವಾರಿ ಸಚಿವ ಡಿ.ಸುಧಾಕರ್, ಪ್ರಚಾರ ಪೋಸ್ಟರ್‍ಗಳನ್ನು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕರ ಎಂ.ಚಂದ್ರಪ್ಪ ಬಿಡುಗಡೆಗೊಳಿಸಿದ್ದಾರೆ.

ಪ್ರೊ.ಪರಮೇಶ್ವರಪ್ಪ ಪರಿಚಯ :  ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆ ಹಟ್ಟಿಯಲ್ಲಿ ಇವರು 15.10.1950 ಜನಿಸಿದರು. ಮೈಸೂರು ವಿವಿಯಲ್ಲಿ ಕನ್ನಡ ವಿಷಯದಲ್ಲಿ ಎಂ.ವಿ. ಪದವಿ ಪಡೆದಿದ್ದಾರೆ. ಬೀದರ್, ಮಾಯಕೊಂಡ, ಬೆಳಗಾವಿ ಜಿಲ್ಲೆಯ ಅಥಣಿ, ಚಳ್ಳಕೆರೆ ಮತ್ತು ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. 1980 ರಿಂದ 30 ವರ್ಷ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2010 ರಲ್ಲಿ ನಿವೃತ್ತರಾಗಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಕ್ರಿಯಾಶೀಲರಾಗಿ ಸಲ್ಲಿಸಿದ್ದಾರೆ.

ಕಲಾಸಿರಿ,ಸಾಹಿತ್ಯ ಸಂಶೋಧನೆ, ಮನಸ್ವಿ, ಬುಡಕಟ್ಟು ಕಥನಗಳು, ವದ್ದೀಕೆರೆ ಸಿದ್ದೇಶ್ವರ ಚರಿತೆ, ವೀರಕರಿಯಣ್ಣ ಪ್ರಮುಖ ಕೃತಿಗಳಾಗಿವೆ. ಚದುರಿದ ಚಿಂತನೆಗಳು ಮತ್ತು ವರ್ತಮಾನದ ಜನರ ಆಲೋಚನೆಗಳ ಎಂಬ ಎರಡು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಬುಡಕಟ್ಟುಗಳ ಕಥೆಗಳನ್ನು ಭಾಮಿನಿ ಷಟ್ಪದಿಯಲ್ಲಿ ಕವನ ರೂಪದಲ್ಲಿ ರಚಿಸಿರುವುದು ಇವರ ವಿಶೇಷವಾಗಿದೆ. ನಾನಾ ಕನ್ನಡ ಸಂಘಟನೆಗಳು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ಗೌರವಿಸಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಈ ಬಗ್ಗೆ ಕನ್ನಡ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮತ್ತು ಹೊಳಲ್ಕೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವಮೂರ್ತಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *