ಮಂಡ್ಯ: ಕಾವೇರಿಗಾಗಿ ಮಂಡ್ಯ ಭಾಗದಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ. ರಸ್ತೆಗಳಲ್ಲಿ ಮಲಗಿ, ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಬಂದ್ ಗೂ ಕರೆ ನೀಡಲಾಗಿದೆ.
ಕನ್ನಡಪರ ಸಂಘಟನೆಗಳಿಂದ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ಬಂದ್ ಮಾಡುವುದಾಗಿ ಹೇಳಿದ್ದಾರೆ. ಕಾವೇರಿ ನೀರು ರೈತರಿಗೆ ಎಷ್ಟು ಮುಖ್ಯವೋ ಬೆಂಗಳೂರಿಗರಿಗೂ ಅಷ್ಟೇ ಮುಖ್ಯವಾಗಿದೆ. ಯಾಕಂದ್ರೆ ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತಿರುವುದು ಇದೇ ಕಾವೇರಿಯಿಂದ. ಹೀಗಾಗಿಯೇ ರೈತರು ಕೂಡ ಬೆಂಗಳೂರಿಗರು ಈ ಹೋರಾಟದಲ್ಲಿ ಭಾಗಿಯಾಗಲು ಸೂಚಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.
ಇನ್ನು ಇಂದು ಮಂಡ್ಯದಲ್ಲಿ ಹೋರಾಟ ಭುಗಿಲೆದ್ದಿದೆ. ರಸ್ತೆಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟ ಜೋರಾದ ಬೆನ್ನಲ್ಲೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಹೋರಾಟಕ್ಕೆ ರೈತರು, ರಾಜಕಾರಣಿಗಳು, ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ. ಇದೀಗ ಹೋರಾಟದ ತೀವ್ರತೆ ಹೆಚ್ಚಾದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.