ಕನ್ನಡಪರ ಚಟುವಟಿಕೆಗಳಿಗೆ ಹಣಕ್ಕಿಂತ ಹೆಚ್ಚಾಗಿ ಕನ್ನಡ ಮನಸ್ಸುಗಳು ಬೇಕು : ಎನ್.ಶಿವಮೂರ್ತಿ

1 Min Read

 

ಹೊಳಲ್ಕೆರೆ: ಕನ್ನಡ ಸಾಹಿತ್ಯ ಪರಿಷತ್ತು ಸರ್ವ ಜನರ ಪರಿಷತ್ತು ಆಗಬೇಕು. ಕನ್ನಡಪರ ಚಟುವಟಿಕೆಗಳ ನಡೆಸಲು ಹಣಕ್ಕಿಂತ ಇಂದು ಕನ್ನಡ ಮನಸ್ಸುಗಳು ಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಅಧ್ಯಕ್ಷರಾದ ಎನ್.ಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಮಗಿರಿ ಹೋಬಳಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಮಕ್ಕಳು, ಮಹಿಳೆಯರು, ಕಾರ್ಮಿಕರನ್ನು ಒಳಗೊಂಡು ಸಮಾಜದ ಎಲ್ಲ ಜನ ವರ್ಗಗಳನ್ನು ಒಳಗೊಂಡು ಮುನ್ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸಗಳ ಜೊತೆ ಸ್ಥಳೀಯ ಕಲಾವಿದರ ಪ್ರೋತ್ಸಾಹಿಸಲು ಜಾನಪದ, ಸ್ಥಳೀಯ ಕಲೆ ಸಂಸ್ಕೃತಿ ಬಿಂಬಿಸುವ ರಂಗನೃತ್ಯ, ಕಂಸಾಳೆ ಮುಂತಾದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಡಿಸೆಂಬರ್ ತಿಂಗಳಲ್ಲಿ ಸಾಣೆಹಳ್ಳಿಯಲ್ಲಿ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಅವಳಿ ಜಿಲ್ಲೆಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಾರ್ಯಯೋಜನೆ ನಡೆಸಬೇಕಾಗಿದೆ. ಇದಕ್ಕೆ ರಾಮಗಿರಿ ಭಾಗದ ಎಲ್ಲ ಕನ್ನಡಪರ ಮನಸ್ಸುಗಳು ಸಹಕರಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಮಗಿರಿ ಹೋಬಳಿ ಕಸಾಪ ಅಧ್ಯಕ್ಷರಾದ ಜಿ.ದೇವರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕೇವಲ ಪಟ್ಟಣ ನಗರಗಳಿಗೆ ಸೀಮಿತವಾಗಬಾರದು ಹಳ್ಳಿಗಳಿಗು ಪಸರಿಸಬೇಕು ಎಂಬ ಉದ್ದೇಶದಿಂದ ಹೊಳಲ್ಕೆರೆ ತಾಲ್ಲೂಕಿನಲ್ಲಿ ಹೋಬಳಿ ಘಟಕಗಳನ್ನು ಆರಂಭಿಸಿರುತ್ತೇವೆ. ಇಂದು ರಾಮಗಿರಿಯಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳಿಗಾಗಿ ಕನ್ನಡ ಭವನ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಸಾಪ ಹೊಳಲ್ಕೆರೆ ಕಾರ್ಯದರ್ಶಿ ಎನ್.ನಾಗೇಶ್, ಕೆ.ಎಸ್.ಸೋಮಶೇಖರ್ ಮಾತನಾಡಿದರು. ಕಸಾಪ ಅಧ್ಯಕ್ಷರಾದ ಎನ್.ಶಿವಮೂರ್ತಿ, ಹೋಬಳಿ ಘಟಕದ ಅಧ್ಯಕ್ಷರಾದ ಜಿ.ದೇವರಾಜು ತಾಳಿಕಟ್ಟೆ, ಕಾರ್ಯದರ್ಶಿ ಬಡ್ತಿ ಮುಖ್ಯೋಪಾಧ್ಯಾಯರಾದ ಗಂಗಾಧರಪ್ಪ, ಮುಖ್ಯೋಪಾಧ್ಯಾಯರಾದ ಆರ್.ಎಸ್ ತಿಮ್ಮಯ್ಯ, ಡಿ.ಸಿದ್ದಪ್ಪ, ಕೆ.ಎಸ್. ಸೋಮಶೇಖರ, ಶಾಲಾ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ವರ್ತಕರಾದ ಮಲ್ಲಾರಾಂ, ಕಸಾಪ ಸಂಘಟನಾ ಕಾರ್ಯದರ್ಶಿ ಎಸ್.ತಿಪ್ಪೇಸ್ವಾಮಿ, ಎಸ್.ಬಂಗಾರಪ್ಪ ಹೊಳಲ್ಕೆರೆ, ಶಿಕ್ಷಕರಾದ ಪ್ರವೀಣಕುಮಾರ, ಮಾದಪ್ಪ, ಓ.ಆರ್.ಪುಷ್ಪಲತಾ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *