ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.05 : ಭದ್ರಾಮೇಲ್ದಂಡೆ ಯೋಜನೆಗಾಗಿ ಕಳೆದ 30-40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಐದು ವರ್ಷಗಳಾದರೂ ಏಕೆ ನಯಾ ಪೈಸೆಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿಲ್ಲ. ಮೊದಲನೆ ಕಂತಿನ ಹಣ ಬಿಡುಗಡೆಯಾಗುವತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಗಡುವು ನೀಡಿದರು.
ಮೂಲ ಸಿದ್ದಾಂತಗಳ ಯಜಮಾನಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲೆಯ ಜನಪರ, ಪ್ರಗತಿಪರ, ದಲಿತಪರ ಸಂಘಟನೆಗಳು ಜಿಲ್ಲಾ ಪಂಚಾಯಿತಿಯಲ್ಲಿರುವ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿರವರ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಭದ್ರಾಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಒಂದೊಂದು ಚುನಾವಣೆಯಲ್ಲೂ ವಿವಿಧ ಪಕ್ಷಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ರೈತರನ್ನು ವಂಚಿಸುತ್ತ ಬರುತ್ತಿವೆ. ಕಳೆದ ಬಜೆಟ್‍ನಲ್ಲಿ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ತೆಗೆದಿಟ್ಟಿರುವುದಾಗಿ ಭಾಷಣ ಮಾಡಿದರು. ಹಣ ಮಾತ್ರ ಏಕೆ ನೀಡುತ್ತಿಲ್ಲ ಎಂದು ಜಿಲ್ಲೆಯ ಶಾಸಕರು, ಕೇಂದ್ರ ಮಂತ್ರಿ ಹಾಗೂ ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದರು.?
ರಾಜ್ಯಾದ್ಯಂತ ಭೀಕರವಾದ ಬರಗಾಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಟಕವಾಡುತ್ತಿವೆ. ಎಲ್ಲಾ ತಕರಾರಿದೆಯೋ ಅಲ್ಲಿ ತ್ವರಿತವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿದರೆ ಬೋರ್‍ವೆಲ್‍ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ರೈತ ಕುಲ ಬೇಡಿದ ಕುಲವಲ್ಲ. ಕೊಟ್ಟ ಕುಲ. 64 ಲಕ್ಷ ಜೀವರಾಶಿಗಳನ್ನು ಸಾಕಿ ಸಲಹಿದ್ದೇವೆ. ರೈತರು ಮತ್ತು ಯೋಧರನ್ನು ನೆನಸಿಕೊಂಡು ದೇಶದ ಜನ ಊಟ ಮಾಡಬೇಕು. ಸಾವಯವ ಕೃಷಿ ಕಡೆ ರೈತರು ಗಮನ ಹರಿಸಬೇಕು. ಸಾಲಕ್ಕೆ ನಾವು ಹೊಣೆಗಾರರಲ್ಲ. ಸರ್ಕಾರ ಜವಾಬ್ದಾರಿ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಾಲ ವಸೂಲಿಗೆ ಹಳ್ಳಿಗೆ ಬಂದರೆ ದೇವರ ಕಂಬಕ್ಕೆ ಕಟ್ಟಿ ಎಂದು ರೈತರಿಗೆ ಹೆಚ್.ಆರ್.ಬಸವರಾಜಪ್ಪ ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ಕಳೆದ ಹದಿನೈದು ವರ್ಷಗಳಿಂದ ಎಲ್ಲಾ ರಾಜಕಾರಣಿಗಳು ಅಧಿಕಾರ ನಡೆಸಿ ಕೈಚೆಲ್ಲಿದ್ದಾಯಿತು. ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ. ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಹಣ ಮಾತ್ರ ಇನ್ನು ಬಿಡುಗಡೆಯಾಗಿಲ್ಲ. ಭೀಕರ ಬರಗಾಲ ಎದುರಾಗಿದೆ. ಭದ್ರಾಮೇಲ್ದಂಡೆ ಯೋಜನೆ ಇಂದಲ್ಲ ನಾಳೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯುತ್ತದೆಂದು ದೇವೇಂದ್ರನ ಆನೆ ರೀತಿ ನೋಡುತ್ತಿದ್ದೇವೆ. ಹಾಗಾಗಿ ಕೇಂದ್ರ ಮಂತ್ರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿಗೆ ಮುಂದಾಗಿದ್ದೇವೆ. ಅಬ್ಬಿನಹೊಳೆ ಹತ್ತಿರ 1.6 ಆರು ಕಿ.ಮೀ. ನಷ್ಟು ಸಮಸ್ಯೆಯಿರುವುದನ್ನು ಸರಿಪಡಿಸಿ ಶೀಘ್ರವೇ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ಕೊಡಬೇಕು. ತುಂಗಾದಿಂದ ಭದ್ರೆಗೆ ಎರಡು ಕಡೆ ಲಿಫ್ಟ್ ಕೆಲಸ ಪೂರ್ಣವಾಗಬೇಕು. ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು. ಒಂದು ತಿಂಗಳ ಹಿಂದೆ ಎಂ.ಪಿ.ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದೆವು. ಇದುವರೆವಿಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಜಿಲ್ಲೆಯ ಅಭಿವೃದ್ದಿ ಮುಖ್ಯವೆ ವಿನಃ ರಾಜಕಾರಣ ಪ್ರಮುಖವಾಗಬಾರದು. ಇದು ನಮ್ಮ ಜೀವನ್ಮರಣದ ಹೋರಾಟ. ಹಣ ಬಿಡುಗಡೆಯಾಗುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಲಿಂಗಪ್ಪ, ಅಪ್ಪರಸನಹಳ್ಳಿ ಬಸವರಾಜ್, ಸುಲ್ತಾನಿಪುರ ರಾಮರೆಡ್ಡಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಹೆಚ್.ಸಿದ್ದಪ್ಪ, ಕುರುಬರಹಳ್ಳಿ ಶಿವಣ್ಣ, ಚಿಕ್ಕಬ್ಬಿಗೆರೆ ನಾಗರಾಜ್, ವನಜಮ್ಮ, ನಾಗರತ್ನ, ಕಮಲಮ್ಮ, ಮಂಜುಳ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಎಲ್ಲಾ ತಾಲ್ಲೂಕು ಅಧ್ಯಕ್ಷರು, ವಿವಿಧ ಜನಪರ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡಿದ್ದವು.