ಚಿಕ್ಕಮಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಆಕ್ಟೀವ್ ಆಗಿವೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆಯ ದಿನ ಬಂದೇಬಿಡುತ್ತೆ. ಹೀಗಾಗಿ ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆಂದು ಪ್ರಿಯಾಂಕ ಗಾಂಧಿ, ಚಿಕ್ಕಮಗಳೂರಿಗೆ ಬಂದಿದ್ದಾರೆ.
ಇಂದು ಮಲೆನಾಡಿಗೆ ಭೇಟಿ ನೀಡಿದ ಪ್ರಿಯಾಂಕ ಗಾಂಧಿ ಮೊದಲಿಗೆ ಶೃಂಗೇರಿ ಶಾರಾದಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನ ಭೇಟಿ ಬಳಿಕ ಪ್ರಿಯಾಂಕ ಗಾಂಧಿ ನರಸಿಂಹ ವನದಲ್ಲಿರುವ ಗುರುಗಳ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಲಿದ್ದಾರೆ. ದೇವಸ್ಥಾನಗಳ ಭೇಟಿ ಬಳಿಕ ಕಾಂಗ್ರೆಸ್ ಕ್ಷೇತ್ರದ ಅಭ್ಯರ್ಥಿ ಟಿ ಡಿ ರಾಜೇಗೌಡರ ಪರ ಮತಯಾಚನೆ ಮಾಡಲಿದ್ದಾರೆ.
ಶೃಂಗೇರಿ ಶಾರದಾ ಪೀಠದ ಬಗ್ಗೆ ಗಾಂಧಿ ಕುಟುಂಬಸ್ಥರು ವಿಶೇಷ ನಂಬಿಕೆ ಇಟ್ಟುಕೊಂಡಿದ್ದಾರೆ. 1978ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಅವರು, ಶಾರಾದಾಂಬ ಪೀಠಕ್ಕೆ ನಮಸ್ಕರಿಸಿ, ವಿಶೇಷ ಪೂಜೆ ಸಲ್ಲಿಸಿದ್ದರು. 2018 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು.