ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭರ್ಜರಿ ಪ್ರಚಾರ ಕಾರ್ಯ ಶುರುವಾಗಿದೆ. ಮೂರು ಪಕ್ಷಗಳು ಕರ್ನಾಟಕ ಚುನಾವಣೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈ ಬಾರಿ ಜನರ ಮನಸ್ಸನ್ನು ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ. ಇದರ ನಡುವೆ ಗುಜರಾತ್ ಚುನಾವಣೆಯ ಸೋಲು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಸಿಕ್ಕ ತೃಪ್ತಿಗಿಂತ ಸೋಲಿನ ಬೇಸರ ಹೆಚ್ಚಾಗಿ ಕಾಡುತ್ತಿದೆ. ಇದೆ ಕಾರಣಕ್ಕೆ ಕರ್ನಾಟಕದ ಮೇಲೆ ಹೆಚ್ಚು ಗಮನಹರಿಸಲಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಇದರ ನಡುವೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಲೆಯುತ್ತಾ ಹೋಗುತ್ತಿದೆ. ಜೊತೆಗೆ ದಲಿತ ಸಿಎಂ ಕೂಗು ಮತ್ತೆ ಜೋರಾಗುಇದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಕರ್ನಾಟಕದ ಚುನಾವಣೆಯಲ್ಲಿ ಗೆಲ್ಲುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಇಂದು ಕಾಂಗ್ರೆಸ್ ನ ರಾಜ್ಯ ನಾಯಕರಿಗೆ ಪ್ರಿಯಾಂಕ ಗಾಂಧಿ ಬುಲಾವ್ ನೀಡಿದ್ದಾರೆ. ದೆಹಲಿಯಲ್ಲಿ ಮುಂದಿನ ಚುನಾವಣೆಯ ರೂಪುರೇಷೆಯ ಬಗ್ಗೆ ಚರ್ಚೆಯಾಗಲಿದೆ.
ಒಂದು ಕಡೆ ಗುಜರಾತ್ ನಲ್ಲಿ ಬಿಜೆಪಿ ಹೊಸ ಪ್ಲ್ಯಾನ್ ಹಾಕಿಕೊಂಡಿತ್ತು. ಹಿರಿಯರಿಗೆ ಕೊಕ್ ನೀಡಿ, ಯುವಕರಿಗೆ ಮಣೆ ಹಾಕಿತ್ತು. ಈ ಎಲ್ಲಾ ಅಂಶಗಳಿಂದ ಗೆಲುವು ಸುಲಭವಾಗಿತ್ತು. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರಿಗೆ ಇದನ್ನು ಪರೋಕ್ಷವಾಗಿ, ಸೂಕ್ಷ್ಮವಾಗಿ ತಿಳಿಸಿದ್ದಾರೆ. ಹೀಗಾಗಿ ಆ ಬಗ್ಗೆಯೂ ಇಂದು ಪ್ರಿಯಾಂಕ ಗಾಂಧಿ ರಾಜ್ಯ ನಾಯಕರ ಜೊತೆಗೆ ಚರ್ಚಿಸಲಿದ್ದಾರಾ ಎಂಬ ಪ್ರಶ್ನೆಯೂ ಕಾಡಿದೆ.
ಪ್ರಿಯಾಂಕ ಗಾಂಧಿಯವರ ಕರೆಗೆ ಹೂಗೊಟ್ಟು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್, ಎಂ ಬಿ ಪಾಟೀಲ್, ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಧ್ರುವ ನಾರಾಯಣ್ ದೆಹಲಿ ಕಡೆಗೆ ಪಯಣ ಬೆಳೆಸಲಿದ್ದಾರೆ.