in ,

ವಿದ್ಯುನ್ಮಾನ, ಸಾಮಾಜಿಕ ಜಾಲತಾಣ, ಇ-ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಏ.12) : ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳಿಗೆ ಜಿಲ್ಲಾ ಎಂ.ಸಿ.ಎಂ.ಸಿಯಿಂದ  ಪ್ರಮಾಣೀಕರಣ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ಇ-ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೂ ಪೂರ್ವಾನುಮತಿ ಅಗತ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯ ಬಿತ್ತರಗೊಳಿಸಲು ಪೂರ್ವಾನುಮತಿ  ಕಡ್ಡಾಯ ಮಾಡಲಾಗಿದೆ. ಇದು ಕೇವಲ ಚುನಾವಣಾ ಸಂದರ್ಭ ಸೇರಿದಂತೆ ಎಲ್ಲ ಸಂದರ್ಭದಲ್ಲಿಯೂ ಅನ್ವಯವಾಗಲಿದೆ.  ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿತವಾಗಿ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಳಿಸಿರುವ ಜಾಹೀರಾತುಗಳಿಗೆ ಪ್ರಮಾಣೀಕರಣ ಪಡೆಯುವುದು ಅಗತ್ಯವಾಗಿದೆ.  ಪ್ರಮಾಣೀಕರಣ ಪಡೆಯಲು ಎರಡು ದಿನ ಮೊದಲು ಅರ್ಜಿ ಸಲ್ಲಿಸಬೇಕು ಎಂದರು.

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಪರಿಶೀಲನೆಗೆ, ಜಾಹೀರಾತುಗಳ ಪ್ರಮಾಣೀಕರಣಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಾಧ್ಯಮ ಮತ್ತು ಕಣ್ಗಾವಲು ಸಮಿತಿ ರಚಿಸಲಾಗಿದೆ. ಪತ್ರಿಕೆಗಳ ಜಾಹೀರಾತು, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳನ್ನು ಪ್ರತಿ ನಿತ್ಯವೂ ನಿಗಾ ವಹಿಸಲಾಗುತ್ತಿದೆ ಎಂದರು.

ಜಾಹೀರಾತು ವೆಚ್ಚಗಳನ್ನು ಅಭ್ಯರ್ಥಿಗಳ ಚುನಾವಣಾ ಲೆಕ್ಕಕ್ಕೆ ತೋರಿಸಲಾಗುವುದು. ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಮಾಡಿದ ದಿನಾಂಕದಿಂದ ಲೆಕ್ಕಕ್ಕೆ ಪರಿಗಣಿಸಲಾಗುವುದು. ಅಭ್ಯರ್ಥಿಯ ಪರವಾಗಿ ಹಾಗೂ ಅಭ್ಯರ್ಥಿಯನ್ನು ಹೊಗಳಿ ಬರೆಯುವುದು, ಸುದ್ದಿ, ಲೇಖನವು ಮತದಾರರಿಗೆ ಪ್ರಭಾವ ಬೀರುವಂತಹದಿದ್ದರೆ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ. ಕಾಸಿಗಾಗಿ ಸುದ್ದಿ ಪ್ರಕಟವಾದರೆ ಚುನಾವಣಾಧಿಕಾರಿ ಮೂಲಕ ಸಂಬಂಧಪಟ್ಟ ಅಭ್ಯರ್ಥಿಗೆ ನೋಟೀಸ್ ಜಾರಿಗೊಳಿಸಲಾಗುವುದು. ಕಾಸಿಗಾಗಿ ಸುದ್ದಿ ಖಚಿತಗೊಂಡರೆ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಲಾಗುವುದು. ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಕಾಸಿಗಾಗಿ ಸುದ್ದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯ್ಕೆಯಾದ ಜನಪ್ರತಿನಿಧಿಗಳು ಅನರ್ಹಗೊಂಡ ಉದಾಹರಣೆಗಳೂ ಇವೆ ಎಂದರು.

ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರವಾಗಿ ಕಾರ್ಯನಿರ್ವಹಿಸಲು ಮಾಧ್ಯಮಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ವಸ್ತುನಿಷ್ಠ ವರದಿ ನಿರೀಕ್ಷಿಸಲಾಗಿದೆ. ಚುನಾವಣಾ ಸುದ್ದಿಗಳು ವರದಿ ಮಾಡುವಾಗ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚಿತವಾಗಿ ಚುನಾವಣಾ ವೆಚ್ಚಗಳ ಉದ್ದೇಶಕ್ಕಾಗಿಯೇ ಪ್ರತ್ಯೇಕವಾಗಿ ಹೊಸ ಬ್ಯಾಂಕ್ ತೆರೆಯಬೇಕು. ಈ ಬ್ಯಾಂಕ್ ಖಾತೆಯಿಂದಲೇ ಪ್ರತಿಯೊಂದು ಚುನಾವಣಾ ವೆಚ್ಚದ ಮಾಹಿತಿ ನೀಡಬೇಕು. ಅಭ್ಯರ್ಥಿಗೆ ಚುನಾವಣಾ ವೆಚ್ಚಕ್ಕೆ ರೂ.40 ಲಕ್ಷ ಮಿತಿಗೊಳಿಸಲಾಗಿದೆ ಎಂದು ಹೇಳಿದರು.

ಚುನಾವಣಾ ಅಕ್ರಮ ತಡೆಗಾಗಿ ತೀವ್ರ ನಿಗಾವಹಿಸಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಆಯ್ದ ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ತೀವ್ರಗೊಳಿಸಿದೆ. ಪ್ರತಿ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಗಾಯತ್ರಿ ಅವರು ಎಂಸಿಎಂಸಿ ಸಂಯೋಜನೆ, ಕಾರ್ಯವಿಧಾನ, ಪೇಯ್ಡ್ ನ್ಯೂಸ್, ಜಾಹೀರಾತು ಚುನಾವಣಾ ವೆಚ್ಚಗಳ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಅವರು ಮಾಧ್ಯಮ ಪ್ರಮಾಣೀಕರಣ, ಕಾಸಿಗಾಗಿ ಸುದ್ದಿ ಕುರಿತು ಮಾಹಿತಿ  ನೀಡಿದರು.

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಮಧು, ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಇದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಿದ್ದರಾಮಯ್ಯ, ಡಿಕೆಶಿ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಗೆಲ್ತಾರಾ ಅಶೋಕ್, ಸೋಮಣ್ಣ..?

ರೋಟರಿ ಕ್ಲಬ್‌ ವತಿಯಿಂದ ಪವಿತ್ರ ರಂಜಾನ್‌ ಉಪವಾಸ ಮುಸ್ಲಿಂ ಬಾಂಧವರಿಗೆ ಹಣ್ಣು ಹಂಪಲು ವಿತರಣೆ