ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏ.30) : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ.2 ರಂದು ಚಿತ್ರದುರ್ಗ ನಗರಕ್ಕೆ ಆಗಮಿಸಲಿದ್ದು, ನಗರದ ಮುರುಘ ರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಆವರಣ)ದಲ್ಲಿ, ಬಿ.ಜೆ.ಪಿ.ಪಕ್ಷದ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.
ಅತಿ ಗಣ್ಯರ ಭದ್ರತಾ ದೃಷ್ಟಿ ಹಾಗೂ ಸುಗಮ ಸಂಚಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ವಿಶೇಷ ಸೂಚನೆ ನೀಡಿ, ನಗರದ ಸಂಚಾರ ಮಾರ್ಗ ಬದಲಾವಣೆ ಮಾಡಿ ಹಾಗೂ ಪಾರ್ಕಿಂಗ್ ಸ್ಥಳ ನಿಗದಿ ಪಡಿಸಿ ಆದೇಶ ಹೊರಡಿಸಿದ್ದಾರೆ.
*ಸಾರ್ವಜನಿಕರಿಗೆ ಸೂಚನೆ*
ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಬೆಂಕಿಪೊಟ್ಟಣ, ಲೈಟರ್ ಸೇರಿದಂತೆ ಯಾವುದೇ ಸ್ಫೋಟಕ ವಸ್ತುಗಳು, ನೀರಿನ ಬಾಟಲ್ ಮತ್ತು ಬ್ಯಾಗ್ ಹಾಗೂ ಅಪಾಯ ಉಂಟುಮಾಡುವ ವಸ್ತುಗಳನ್ನು ತರುವಂತಿಲ್ಲ. ಕಪ್ಪುಬಟ್ಟೆ ಧರಿಸಿ ಕಾರ್ಯಕ್ರಮಕ್ಕೆ ಬರುವಂತಿಲ್ಲ. ಯಾವುದೇ ಭಿತ್ತಿ ಪತ್ರ, ಕರ ಪತ್ರಗಳನ್ನು ತರುವಂತಿಲ್ಲ.
*ಸಂಚಾರ ಮಾರ್ಗ ಬದಲಾವಣೆ*
ವಿಮಾನದ ಮೂಲಕ ಚಳ್ಳಕೆರೆ ತಾಲ್ಲೂಕು ಕುದಾಪುರದ ಬಳಿ ಇರುವ ಡಿಆರ್‌ಡಿಓಗೆ ಆಗಮಿಸುವ ಪ್ರಧಾನ ಮಂತ್ರಿಗಳು ನಂತರ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ನಗರದ ಓನಕೆ ಓಬವ್ವ ಕ್ರೀಡಾಂಗಣಕ್ಕೆ ಆಗಮಿಸಿ, ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸುವ ಹಾಗೂ ಹೊರ ಹೋಗುವ ವಾಹನಗಳ ರಸ್ತೆ ಮಾರ್ಗಗಳನ್ನು ಬದಲಾಣೆ ಮಾಡಲಾಗಿದೆ.
ಸಮಾರಂಭಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಚಿತ್ರದುರ್ಗಕ್ಕೆ ಬೆಂಗಳೂರು, ಕಡೆಯಿಂದ ಬರುವ ವಾಹನಗಳು ಕ್ಯಾದಿಗೆರೆಯಿಂದ ಹೊಸ ಬೈಪಾಸ್ ಮೂಲಕ ಸಂಚರಿಸಿ, ಎನ್.ಹೆಚ್.50 ಪಿಳ್ಳೆ ಕೇರನಹಳ್ಳಿ ಮೂಲಕ ಚಿತ್ರದುರ್ಗ ನಗರ ಪ್ರವೇಶಿಸುವುದು.
ದಾವಣಗೆರೆ ಕಡೆಯಿಂದ ಬರುವ ವಾಹನಗಳು ಜೆ.ಎಂ.ಐ.ಟಿ. ಸರ್ಕಲ್ ಮೂಲಕ ನಗರ ಪ್ರವೇಶಿಸುವುದು.
ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ ಕಡೆಗೆ ಚಲಿಸುವ ಕೆ.ಎಸ್.ಆರ್.ಟಿ.ಸಿ, ಮತ್ತು ಇತರ ವಾಹನಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಜಿ.ಎಂ.ಐ.ಟಿ, ಸರ್ಕಲ್ ಮೂಲಕ ಸೀಬಾರ ಕ್ರಾಸ್ ಅಥವಾ ಎನ್.ಹೆಚ್.50 ಮೂಲಕ ಹೊಸ ಬೈಪಾಸ್ ರಸ್ತೆ ಸೇರುವುದು.
ಶಿವಮೊಗ್ಗ, ದಾವಣಗೆರೆ ಚಳ್ಳಕೆರೆ, ಬೆಂಗಳೂರು, ಹೊಸಪೇಟೆ ಕಡೆಗೆ ಚಲಿಸುವ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಎ.ಪಿ.ಎಂ.ಸಿ. ಮೆದೇಹಳ್ಳಿ ರಸ್ತೆ ಮೂಲಕ ಹಾಯ್ದು ಸೀಬಾರ ಕ್ರಾಸ್ ಅಥವಾ ಎನ್.ಹೆಚ್.50 ಮೂಲಕ ಹೊಸ ಬೈಪಾಸ್ ಸೇರುವುದು. ನಗರದ ಚಳ್ಳಕೆರೆ ಕ್ರಾಸ್‌ನಿಂದ ಮದಕರಿ ವೃತ್ತದವರೆಗಿನ ರಸ್ತೆಯಲ್ಲಿ ವಿ.ಐ.ಪಿ, ಪಾಸ್ ಹೊಂದಿದ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
*ಪಾರ್ಕಿಂಗ್ ಸ್ಥಳಗಳು*
ಕಾರ್ಯಕ್ರಮ ಸ್ಥಳಕ್ಕೆ ಬೆಂಗಳೂರು, ಹಿರಿಯೂರು ಕಡೆಯಿಂದ ಆಗಮಿಸುವ ವಾಹನಗಳು ಹಳೇ ಬೆಂಗಳೂರು ರಸ್ತೆಯಲ್ಲಿ ಪಾರ್ಕಿಂಗ್ ಮಾಡಬೇಕು
ಬಳ್ಳಾರಿ ಹಾಗೂ ಚಳ್ಳಕೆರೆ ಕಡೆಯಿಂದ ಆಗಮಿಸುವ ವಾಹನಗಳು ಶನೇಶ್ವರ ದೇವಸ್ಥಾನ, ಶ್ರೀರಾಮಕಲ್ಯಾಣ ಮಂಟಪದ ಬಳಿ ಪಾರ್ಕ್ ಮಾಡಬೇಕು. ತುರುವನೂರು ಕಡೆಯಿಂದ ಬರುವ ವಾಹನಗಳು ವೆಂಕಟೇಶ್ವರ ಸ್ವಾಮಿ ದೇವಾಲಯದ ಅವರಣದಲ್ಲಿ ಪಾರ್ಕ್ ಮಾಡುವುದು.
ಹೊಸಪೇಟೆ, ಜಗಳೂರು, ದಾವಣಗೆರೆ ಕಡೆಯಿಂದ ಬರುವ ವಾಹನಗಳನ್ನು ಪೊಲೀಸ್ ಸಮುದಾಯ ಭವನಹಾಗೂ ಕೆ.ಇ.ಬಿ. ಸಮುದಾಯ ಭವನದ ಬಳಿ ಪಾರ್ಕ್ ಮಾಡುಬೇಕು. ಶಿವಮೊಗ್ಗ ಹೊಳಲ್ಕೆರೆ ಕಡೆಯಿಂದ ಬರುವ ವಾಹನಗಳು ಮಾಳಪ್ಪನಹಟ್ಟಿ, ಮುರುಘಾ ಮಠ, ಜೆ.ಎಂ.ಐ.ಟಿ ರೈಲ್ವೆ ಕ್ರಾಸಿಂಗ್ ಮೂಲಕ ಸಂಚರಿಸಿ ಎ.ಪಿ.ಎಂ.ಸಿ.ಯಲ್ಲಿ ಪಾರ್ಕ್ ಮಾಡುಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.