ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್. 18 : ಅದಾನಿ, ಅಂಬಾನಿಯನ್ನು ಪೋಷಿಸಿ ಬೆಳೆಸುತ್ತಿರುವ ದೇಶದ ಪ್ರಧಾನಿ ನರೇಂದ್ರಮೋದಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಸೋಲಿಸಿ ಮನೆಗೆ ಕಳಿಸುವ ಸಮಯ ಬಂದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಮುವಾದಿ ಬಿಜೆಪಿಯನ್ನು ದೇಶದಿಂದ ಹೊರ ಹಾಕಬೇಕಿದೆ. ರಾಜ್ಯದಲ್ಲಿ ಬರಗಾಲವಿದ್ದು, ರೈತರು ಜನಸಾಮಾನ್ಯರು ತತ್ತರಿಸುತ್ತಿದ್ದರೂ ಚಕಾರವೆತ್ತದ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಲ್ಲಿ ತಲ್ಲೀನರಾಗಿದ್ದಾರೆ. ಜಾತಿ, ಧರ್ಮಗಳ ನಡುವೆ ಕಿತ್ತಾಟವಿಟ್ಟು, ಜನರನ್ನು ದಿಕ್ಕುತಪ್ಪಿಸುತ್ತಿರುವುದು ಅವರಿಗೆ ಶೋಭೆಯಲ್ಲ. ರಾಷ್ಟ್ರದ ವಿಚಾರಕ್ಕಾಗಿ ಎಂದಿಗೂ ಅವರು ವಿದೇಶಕ್ಕೆ ಹೋಗಿಲ್ಲ. ದೇಶದಲ್ಲಿ ಅಘೋಷಿತ ತುರ್ತು ಸಂದರ್ಭವಿದೆ. ಪ್ರಶ್ನಿಸುವವರನ್ನು ಹೆದರಿಸಿ ಗೂಂಡಾಗಿರಿ ರಾಜಕಾರಣ ನಡೆಸುತ್ತಿದ್ದಾರೆಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್‍ಗಾಂಧಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ನಾಯಕರುಗಳ ಸಲಹೆಯಂತೆ ಪಕ್ಷ ಚುರುಕಾಗಿ ಸಂಘಟನೆಯಲ್ಲಿ ತೊಡಗಿದೆ. ಪಂಚರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲುವು ನಮ್ಮದೆ. ರಾಜ್ಯದಿಂದ ಗೆದ್ದಿರುವ ಬಿಜೆಪಿ ಎಂ.ಪಿ.ಗಳು ಪ್ರಧಾನಿ ಮುಂದೆ ನಿಂತು ರಾಜ್ಯದ ಅಭಿವೃದ್ದಿಗೆ ಯಾವ ಬೇಡಿಕೆಯನ್ನು ಇದುವರೆವಿಗೂ ಮಂಡಿಸಿಲ್ಲ. ಮೋದಿ ಎದುರು ನಿಂತು ಕೇಳುವ ಧೈರ್ಯವೂ ಅವರುಗಳಿಗೆ ಇಲ್ಲದಂತಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಜನಪರವಾದ ವಿರೋಧ ಪಕ್ಷವಿರಬೇಕೆ ವಿನಃ ಜನರಿಗೆ ತಪ್ಪು ಸಂದೇಶ ನೀಡುವಂತಾಗಬಾರದು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಕಷ್ಠವಾಗಿದೆ. ಮಳೆಯಿಲ್ಲದೆ ರೈತರು ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲು ಆಗುತ್ತಿಲ್ಲ. ಇದ್ಯಾವುದರ ಪರಿವೆ ಇಲ್ಲದ ಪ್ರಧಾನಿ ಮೋದಿರವರು ಉದ್ಯಮಿಗಳು, ಬಂಡವಾಳ ಶಾಹಿಗಳ ಪರವಾಗಿ ನಿಂತಿರುವುದು ದೇಶದ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಮಾಜಿ ಶಾಸಕ ಎ.ವಿ.ಉಮಾಪತಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಕರಿಯಪ್ಪ ಪಾಲವ್ವನಹಳ್ಳಿ, ನ್ಯಾಯವಾದಿ ಗಂಗಾಧರ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಹಫೀಜ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.