ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.03) : ಒಂದು ಕಾಲದಲ್ಲಿ ಓ.ಬಿ.ಸಿ.ಕಾಂಗ್ರೆಸ್ ಓಟ್ ಬ್ಯಾಂಕ್ ಆಗಿತ್ತು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಭಾರತೀಯ ಜನತಾಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜಿಲ್ಲಾ ಮಹಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಆದರೂ ಇನ್ನು ಅವರುಗಳ ಜೀವನ ಮಟ್ಟ ಸುಧಾರಣೆಯಾಗಿಲ್ಲ. ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಓ.ಬಿ.ಸಿ.ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ. ಮಧ್ಯ ಕರ್ನಾಟಕದಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಓ.ಬಿ.ಸಿ.ಜನಾಂಗ ಜಾಸ್ತಿಯಿದೆ. ಎಸ್ಸಿ, ಎಸ್ಟಿ, ಓ.ಬಿ.ಸಿ.ಜನಾಂಗದ ಹೆಚ್ಚು ಸಂಸದರಿರುವುದು ಬಿಜೆಪಿ.ಯಲ್ಲಿ ಮಾತ್ರ. ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವುದು ಪ್ರಧಾನಿ ಮೋದಿರವರ ಧ್ಯೇಯ.
ಆರ್.ಎಸ್.ಎಸ್.ರಾಜಕೀಯಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ಕಾಂಗ್ರೆಸ್, ಜೆಡಿಎಸ್.ನವರು ಬಿಜೆಪಿ, ಆರ್.ಎಸ್.ಎಸ್.ಅನ್ನು ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಿಂದುಳಿದವರಿಗೆ ಅನೇಕ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಪಕ್ಷಕ್ಕೆ ಕರೆತರುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಬೇಕಿದೆ ಎಂದು ತಿಳಿಸಿದರು.
ಎರಡು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಒಂದು ಗೆದ್ದು ಮತ್ತೊಂದನ್ನು ಕಳೆದುಕೊಂಡಿದ್ದೇವೆ. ಇದರಿಂದ ಯಾರು ಧೃತಿಗೆಡುವುದು ಬೇಡ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ್ ಅರಸ್ರವರ ಕೊಡುಗೆಯಿಂದ ಎಲ್ಲಾ ಜಾತಿಯವರು ರಾಜಕಾರಣಿ, ಅಧಿಕಾರಿಗಳಾಗಿದ್ದಾರೆ. ಹಾಸ್ಟೆಲ್ಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಹಿಂದುಳಿದ ವರ್ಗಗಳ ಧೀಮಂತ ನಾಯಕ ಎಂದು ಸ್ಮರಿಸಿದರು.
ಬಿಜೆಪಿ. ಓ.ಬಿ.ಸಿ. ಮೋರ್ಚಾ ರಾಜ್ಯಾಧ್ಯಕ್ಷ ನೇಲ ನರೇಂದ್ರಬಾಬು ಮಾತನಾಡುತ್ತ 2015 ರಲ್ಲಿ ಓ.ಬಿ.ಸಿ.ಮೋರ್ಚಾ ಆರಂಭಗೊಂಡಿತು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾಗಿದ್ದರೂ ದಲಿತರು, ಹಿಂದುಳಿದವರು ಇನ್ನು ರಾಜಕೀಯ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಮುಖ್ಯವಾಹಿನಿಗೆ ಬಂದಿಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ 27 ಮಂದಿಯನ್ನು ಸಚಿವರನ್ನಾಗಿ ಮಾಡಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಬ್ರಿಟೀಷರ ಧಾಳಿ ನಂತರ ಓ.ಬಿ.ಸಿ.ಕುಲಕಸುಬನ್ನೇ ಕಳೆದುಕೊಂಡಿದೆ.
ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಹಾಗೂ ಪಂಚರತ್ನಗಳಲ್ಲಿನ ಪದಾಧಿಕಾರಿಗಳು ಹಿಂದುಳಿದವರ ಸಮಸ್ಯೆಗಳನ್ನು ವಿಚಾರಿಸಿ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಅಧಿಕಾರವಿಲ್ಲದ ಜವಾಬ್ದಾರಿ, ಜವಾಬ್ದಾರಿಯಿಲ್ಲದ ಅಧಿಕಾರ ಎರಡು ನಿಷ್ಪ್ರಯೋಜಕ. ಶಿಕ್ಷಣದಿಂದ ಮಾತ್ರ ಓ.ಬಿ.ಸಿ. ಮುಂದೆ ಬರಲು ಸಾಧ್ಯ. ಹಾಗಾಗಿ ಹಿಂದುಳಿದವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ಯಾದವ್ ಮಾತನಾಡಿ ಪಂಚರತ್ನ ಕಮಿಟಿಯಲ್ಲಿ ಓ.ಬಿ.ಸಿ.ಸಮುದಾಯವನ್ನು ಜೋಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಸಭೆಯ ಉದ್ದೇಶ. ಪಂಡಿತ್ ದೀನದಯಾಳ್ರವರ ಕನಸು ಈಡೇರಬೇಕು. ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಓ.ಬಿ.ಸಿ.ಯನ್ನು ಗಟ್ಟಿಗೊಳಿಸಬೇಕು. ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲಗಳಲ್ಲಿ ಸಂಪೂರ್ಣ ವಿವರ ಸಂಗ್ರಹಿಸಿ ಓ.ಬಿ.ಸಿ.ಯನ್ನು ಸಂಘಟಿಸಬೇಕಾಗಿದೆ. ಇಲ್ಲಿಯವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್. ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ.ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪ್ರವೀಣ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ. ಓ.ಬಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ಬಾಬು, ಶಂಕರಪ್ಪ, ಚಿತ್ರದುರ್ಗ ಜಿಲ್ಲಾ ಸಹ ಪ್ರಭಾರಿ ಹೇಮಂತ್, ನಗರ ಘಟಕದ ಅಧ್ಯಕ್ಷ ಕೃಷ್ಣ, ಗ್ರಾಮಾಂತರ ಘಟಕದ ಅಧ್ಯಕ್ಷ ಮಹಾಂತೇಶ್, ಜೈಪಾಲ್ ವೇದಿಕೆಯಲ್ಲಿದ್ದರು.