ಅತಿಯಾದ ಮಳೆಯ ಕಾರಣದಿಂದ ಉತ್ತರ ಕರ್ನಾಟಕ ಭಾಗದಲ್ಕಿ ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ಎಲ್ಲೆಡೆ ಈರುಳ್ಳಿ ಸಿಗುತ್ತಿಲ್ಲ. ಆದ ಕಾರಣ ಈರುಳ್ಳಿ ಬೆಲೆಯಲ್ಲಿ ಸಾಮಾನ್ಯವಾಗಿಯೇ ಬೆಲೆ ಜಾಸ್ತಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 79 ರೂಪಾಯಿ ಇದೆ. ಚಿಲ್ಲರೆ ವ್ಯಾಪಾರಿಗಳು 55 ರಿಂದ 65 ರೂಪಾಯಿ ತನಕ ಮಾರಾಟ ಮಾಡುತ್ತಿದ್ದಾರೆ. ಇದು ಗ್ರಾಹಕರಿಗೆ ಸರಿಯಾಗಿ ಹೊಡೆತ ಬಿದ್ದಿದೆ. ಈರುಳ್ಳಿ ಕೊಂಡುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ.
ಇದನ್ನೆಲ್ಲಾ ಗಮನಿಸಿದ ಕೇಂದ್ರ ಸರ್ಕಾರ ಸಾರ್ವಜನಿಕರ ಅನುಕೂಲದ ಕಡೆಗೆ ಗಮನ ಹರಿಸಿದೆ. ಬೆಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಇಂದಿನಿಂದ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದಡಿಯಲ್ಲಿ ಈ ಕೆಲಸ ನಡೆಯಲಿದೆ.
ಮೊಬೈಲ್ ವ್ಯಾನ್ ಮೂಲಕ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಈರುಳ್ಳಿ ಮಾರಾಟವಾಗಲಿದೆ. ಕೇವಲ 35 ರೂಪಾಯಿಗೆ ಒಂದು ಕೆಜಿ ಈರುಳ್ಳಿಯಂತೆ ಮಾರಾಟ ಮಾಡಲಾಗುತ್ತದೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ತರಿಸಿದ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತದೆ. ಈರುಳ್ಳಿ ದರ ಸಹಜ ಸ್ಥಿತಿಗೆ ಬರುವ ತನಕವೂ ಈ ಮಾರಾಟ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ. ಇಂದಿನಿಂದ 112 ಮೊಬೈಲ್ ವ್ಯಾನ್ ಗಳು ಮಾರಾಟ ಮಾಡಲಿವೆ. ಈ ರೀತಿಯ ಕಾರ್ಯದಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲೂ ಮಧ್ಯಮ ಹಾಗೂ ಬಡವರಿಗೆ ಈ ಯೋಜನೆ ತುಂಬಾ ಅನುಕೂಲವಾಗಿದೆ.