ಬೆಂಗಳೂರು: ರಾಜ್ಯದ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಬಿಜೆಪಿ ಪಕ್ಷ ಮೊದಲು ಪಕ್ಷ ಸಂಘಟನೆ ಜೊತೆಗೆ ಜನರ ಮನಸ್ಸನ್ನು ಗೆಲ್ಲುವ ಕಡೆ ಗಮನ ಕೊಟ್ಟಿದ್ದಾರೆ. ಅದರಂತೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ಗುಜರಾತ್ ಗೆಲುವಿನ ಬಳಿಕ ಕರ್ನಾಟಕ ಪ್ರತಿಷ್ಠೆಯ ಕಣವಾಗಿದೆ.
ಇದರ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಸಾಲು ಸಾಲು ಸವಾಲುಗಳು ಶುರುವಾಗಿದೆ. ಒಂದು ಕಡೆ ಲಿಂಗಾಯತ ಸಮುದಾಯದವರು ನಮಗೆ ಮೀಸಲಾತಿ ಹೆಚ್ಚಿಸಿ ಎಂದು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ರೆ, ಆ ಕಡೆ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದಿದ್ದಾರೆ. ಇಬ್ಬರು ಪ್ರತ್ಯೇಕ ಪ್ರಕರಣದಿಂದಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಚಿವ ಸ್ಥಾನ ಪಡೆಯಲೇಬೇಕೆಂದು ಪಣ ತೊಟ್ಟಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು ಹೊತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅವರು, ದೆಹಲಿಗೆ ಪಯಣ ಬೆಳೆಸಿದ್ದರು. ಹೈಕಮಾಂಡ್ ಜೊತೆಗೆ ಸಭೆ ಕೂಡ ನಡೆಸಿದರು. ಆದರೆ ಆ ಕಡೆಯಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿ ಸಿಎಂ ಬೊಮ್ಮಾಯಿ ಅವರಿಗೆ ಒಕ್ಕಲಿಗರು, ಲಿಂಗಾಯತರನ್ನು ಸುಧಾರಿಸುವುದು ಒಂದು ಟಾಸ್ಕ್ ಆದ್ರೆ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರನ್ನು ಸಮಾಧಾನ ಪಡಿಸುವುದು ಮತ್ತೊಂದು ಟಾಸ್ಕ್ ಆಗಿದೆ.