ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆ.12 : ಟೆಂಟ್, ಗುಡಿಸಲು, ಗುಡಾರಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಅರೆಅಲೆಮಾರಿಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಅಲೆಮಾರಿಗಳ ಆಯೋಗ ರಚನೆಯಾಗಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ಧ್ವಾರಕನಾಥ್ ಹೇಳಿದರು.
ಅಲೆಮಾರಿ ಮಹಾಸಭಾ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ, ವಿಮುಕ್ತಿ ವಿದ್ಯಾಸಂಸ್ಥೆ ವತಿಯಿಂದ ಅಲೆಮಾರಿ ಸಮುದಾಯದ ಸಮಸ್ಯೆ ಮತ್ತು ಸವಾಲುಗಳ ಕುರಿತು ಭಾರತ ಸೇವಾದಳದ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಂವಾದ ಉದ್ಘಾಟಿಸಿ ಮಾತನಾಡಿದರು.
ಅಲೆಮಾರಿ, ಅರೆಅಲೆಮಾರಿ ಸಮುದಾಯ ಯಾರ ಕಣ್ಣಿಗೂ ಕಾಣುತ್ತಿಲ್ಲ. ಶೇ.8 ರಿಂದ ಹತ್ತು ಪರ್ಸೆಂಟ್‍ನಷ್ಟು ಅಲೆಮಾರಿಗಳು ಭಾರತದಲ್ಲಿದ್ದಾರೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಜಾಸ್ತಿಯಿದ್ದಾರೆ. ರಾಜ್ಯದಲ್ಲಿ ಅಂದಾಜು 48 ಲಕ್ಷದಷ್ಟು ಅಲೆಮಾರಿಗಳಿದ್ದಾರೆ. ಕುಲದೀಪ್‍ಸಿಂಗ್ ಆಯೋಗದ ಪ್ರಕಾರ ಎರಡರಿಂದ ಎರಡುವರೆ ಲಕ್ಷಕ್ಕೆ ಒಬ್ಬ ಶಾಸಕ ಇರಬೇಕು.
ದುರಂತವೆಂದರೆ ಒಬ್ಬ ಶಾಸಕ, ಸಚಿವ, ಎಂಎಲ್‍ಸಿ. ಕೂಡ ಇಲ್ಲ. ಇದು ಒಂದು ಕಡೆಯಿರಲಿ. ಜಿಲ್ಲಾ ಪಂಚಾಯಿತಿ, ಸದಸ್ಯ, ಮೇಯರ್ ಗಳು ಕೂಡ ಇದುವರೆವಿಗೂ ಯಾರು ಆಗಿಲ್ಲ. ರಾಜಕೀಯ ಶಕ್ತಿ ಇಲ್ಲದ ಕಾರಣ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತಾರು ವರ್ಷಗಳಾಗಿದ್ದರೂ ಇನ್ನು ಅಲೆಮಾರಿಗಳು ಟೆಂಟ್‍ಗಳು ಹೀನಾಯವಾಗಿ ವಾಸ ಮಾಡುತ್ತಿದ್ದಾರೆಂದು ವಿಷಾಧಿಸಿದರು.
ಎಸ್ಸಿ, ಎಸ್ಟಿ, ಓ.ಬಿ.ಸಿ.ಗಳಿಗೆ ಸೇರಿದ ಅಲೆಮಾರಿಗಳು ಇದ್ದಾರೆ. ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡುಗೊಲ್ಲರು ಇನ್ನು ಮೌಢ್ಯದಿಂದ ಹೊರಬಂದಿಲ್ಲ. ಹೆಣ್ಣು ಮಕ್ಕಳು ಮುಟ್ಟಾದರೆ, ಹೆರಿಗೆಯಾದರೆ ಊರಿನಿಂದ ಹೊರಗೆ ಗುಡಿಸಲಲ್ಲಿರಬೇಕು. ಇಂತಹ ಮೌಢ್ಯ ತೊರೆಯುವ ಕೆಲಸವಾಗಬೇಕು. ಭೂಮಿ, ನಿವೇಶನ, ಮನೆ, ಶಿಕ್ಷಣ, ಆರೋಗ್ಯ, ಜಾತಿ ಸರ್ಟಿಫಿಕೇಟ್ ಸಮಸ್ಯೆ ಇವುಗಳೆಲ್ಲಾ ನಿವಾರಣೆಯಾಗಬೇಕಾದರೆ ಒಂದು ಗವಾಕ್ಷಿಯಿಂದ ಮಾತ್ರ ಸಾಧ್ಯ.
ಅದಕ್ಕಾಗಿ ಅಲೆಮಾರಿ ಅರೆಅಲೆಮಾರಿ ಜನಾಂಗದ 32 ಜಾತಿ ಜನರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅಲೆಮಾರಿಗಳ ಆಯೋಗ ರಚನೆಯಾಗಬೇಕೆಂದು ಒತ್ತಾಯಿಸಿದ್ದೇನೆ. ಮೊದಲು ಸಂಘಟಿತರಾಗಿ ಹೋರಾಟಕ್ಕಿಂತ ಮುಖ್ಯವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಅಲೆಮಾರಿಗಳನ್ನು ಜಾಗೃತಿಗೊಳಿಸಿದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಕೊಡುಗೆಯಾಗಿ ದೇಶಕ್ಕೆ ನೀಡಿರುವ ಸಂವಿಧಾನವನ್ನು ಪ್ರತಿಯೊಬ್ಬರು ಓದಿಕೊಂಡಾಗ ಮಾತ್ರ ತನ್ನ ಹಕ್ಕು ಏನೆಂಬುದು ಗೊತ್ತಾಗುತ್ತದೆ. ಭಾರತ 77 ನೇ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಅಲೆಮಾರಿ, ಅರೆಅಲೆಮಾರಿಗಳು ಇನ್ನು ಮೂಲಭೂತ ಸೌಲಭ್ಯ ಸಿಕ್ಕಿಲ್ಲ ಎಂದು ಹೋರಾಟ ನಡೆಸುತ್ತಿರುವುದು ನೋವಿನ ಸಂಗತಿ ಎಂದರು.
ವಿಧಾನಸಭೆಯಲ್ಲಿ ಹಿಂಭಾಗಿಲಿನಿಂದ ಓಡಾಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಅದಕ್ಕಾಗಿ ಅಲೆಮಾರಿಗಳು ಸಂವಿಧಾನವನ್ನು ಓದಿಕೊಂಡಾಗ ಯಾರನ್ನು ಹೇಗೆ ಪ್ರಶ್ನಿಸಿ ಹಕ್ಕು ಪಡೆದುಕೊಳ್ಳಬೇಕು ಎನ್ನುವುದು ಗೊತ್ತಾಗುತ್ತದೆ. ಇಲ್ಲದಿದ್ದರೆ ಶೋಷಣೆಯಿಂದ ಹೊರಬರಲು ಆಗುವುದಿಲ್ಲ. ಪ್ರತಿ ಜಿಲ್ಲೆಯಲ್ಲಿಯೂ 20 ರಿಂದ 25 ಕೋಟಿ ರೂ.ಅನುದಾನ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಅಂಬೇಡ್ಕರ್‍ರವರ ಸಂವಿಧಾನದ ಆಶಯ ಈಡೇರಲಿದೆ ಎಂದು ಹೇಳಿದರು.
ಬಸವ ರಮಾನಂದಸ್ವಾಮಿ ಮಾತನಾಡಿ ಸಾಮಾಜಿಕ ಮನ್ನಣೆ ಸಿಗಬೇಕಾದರೆ ಅಲೆಮಾರಿ, ಅರೆಅಲೆಮಾರಿಗಳ ಬದುಕು ಅಭಿವೃದ್ದಿಯಾಗಬೇಕು. ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣವಂತರಾಗಬೇಕು. ಹೋರಾಟದಿಂದ ಮಾತ್ರ ಸಂವಿಧಾನಬದ್ದವಾಗಿ ಸಿಗಬೇಕಾದ ಹಕ್ಕುಗಳನ್ನು ಸರ್ಕಾರದಿಂದ ಪಡೆಯಬಹುದು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣವಂತರನ್ನಾಗಿ ಮಾಡಿ ಆಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ರಾಜ್ಯದ 31 ಜಿಲ್ಲೆಗಳಲ್ಲಿಯೂ ಅಲೆಮಾರಿ, ಅರೆಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕೆ ಉಚಿತ ವಸತಿ ಶಾಲೆಗಳನ್ನು ತೆರೆಯಬೇಕು. ಶಿಕ್ಷಣದೊಂದಿಗೆ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡಾಗ ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳಬಹುದು ಎಂದು ಅಲೆಮಾರಿ ಜನಾಂಗಕ್ಕೆ ಕರೆ ನೀಡಿದರು.
ಅಲೆಮಾರಿ ಮಹಾಸಭಾ ಅಧ್ಯಕ್ಷ ನಾಗರಾಜ್ ಕೆ.ಎಂ. ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್.ವಿಶ್ವಸಾಗರ್ ಇವರುಗಳು ಮಾತನಾಡಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಬಡ್ಗ ಜಂಗಮ ಸಂಘದ ಅಧ್ಯಕ್ಷ ಗುರುಮೂರ್ತಿ, ಕೊರಚ ಸಂಘದ ಜಿಲ್ಲಾಧ್ಯಕ್ಷ ವೈ.ಕುಮಾರ್, ನ್ಯಾಯವಾದಿ ಓ.ಪ್ರತಾಪ್‍ಜೋಗಿ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.