ಬೆಂಗಳೂರು: ಬೆಂಗಳೂರು ನಗರದ ರಸ್ತೆ ಗುಂಡಿಗಳು ಹಾಗೂ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿಯು ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದೆ ಎಂದು ಪಕ್ಷದ ಮುಖಂಡ ಹಾಗೂ ವಕೀಲರಾದ ಜಗದೀಶ್ ಕೆ.ಎನ್. ಮಹಾದೇವ್ ಹೇಳಿದರು.
ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಿದ್ದಿವೆ. ಇವುಗಳಿಂದಾಗಿ ಕೆಲವು ವಾಹನಸವಾರರು ಕೈಕಾಲು ಮುರಿದುಕೊಂಡರೆ, ಇನ್ನು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ.
ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಸಮರ ಆರಂಭಿಸಿದ್ದು, ಇದಕ್ಕಾಗಿ ವಿಶೇಷ ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸುತ್ತಿದ್ದೇವೆ. ಸೂಕ್ತ ಕಾನೂನು ಹೋರಾಟದ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಪಣತೊಟ್ಟಿದ್ದೇವೆ ಎಂದು ಹೇಳಿದರು.
ನಗರದಲ್ಲಿ ರಸ್ತೆ ಕಳಪೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡುಬಂದರೆ ತಕ್ಷಣವೇ ನಮ್ಮ ವಾಟ್ಸಪ್ ಸಹಾಯವಾಣಿ 9513319676 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ ಎಂದು ಹೇಳಿದರು.