President election: ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಇಂದು (ಜುಲೈ 18) ಮತದಾನ ಆರಂಭಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದ್ದು, ಜುಲೈ 24 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಪ್ರತಿಪಕ್ಷದ ಯಶವಂತ್ ಸಿನ್ಹಾ ಅವರ ಮೇಲೆ ಸ್ಪಷ್ಟವಾದ ಮುನ್ನಡೆ ಹೊಂದಿದ್ದಾರೆ. ದ್ರೌಪದಿ ಮುರ್ಮು ಅವರು ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿಯಂತಹ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸುಮಾರು ಮೂರನೇ ಎರಡರಷ್ಟು ಮತಗಳನ್ನು ತಲುಪುವ ನಿರೀಕ್ಷೆಯಿರುವುದರಿಂದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯಾಗುವ ಸಾಧ್ಯತೆಯಿದೆ. ಒಟ್ಟು 10,86,431 ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ 6.67 ಲಕ್ಷಕ್ಕೂ ಅಧಿಕ ಮತಗಳನ್ನು ಹೊಂದಿದ್ದಾರೆ.